ಮೋದಿಗೆ ಮತ ಹಾಕಲು ಆಸ್ಟ್ರೇಲಿಯಾದಲ್ಲಿ ನೌಕರಿ ಬಿಟ್ಟ ಮಂಗ್ಳೂರಿಗ!

Public TV
2 Min Read

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಿ ಮಾತನಾಡಿದ್ದರು. ಈ ವೇಳೆ ಮೋದಿ ಅವರನ್ನು 2ನೇ ಬಾರಿಗೆ ಪ್ರಧಾನಿಯನ್ನಾಗಿ ನೋಡಲು ಇಚ್ಛಿಸಿದ್ದ ಯುವಕ ತನ್ನ ಕೆಲಸ ತೊರೆದು ಸಮಾವೇಶಕ್ಕೆ ಆಗಮಿಸಿದ್ದರು.

ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ನಡುವೆ ಇದ್ದ ಅವರ ಹೆಸರು ಸುಧೀಂದ್ರ ಹೆಬ್ಬಾರ್ (41). ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಧೀಂದ್ರ, ಚುನಾವಣೆಯಲ್ಲಿ ಮತ ಚಲಾಯಿಸಲು ರಜೆಗೆ ಮನವಿ ಸಲ್ಲಿಸಿದ್ದರು. ಆದರೆ ಏ.5 ರಿಂದ ಏ.12 ವರೆಗೂ ರಜೆ ನೀಡಿ ಆ ಬಳಿಕ ಈಸ್ಟರ್ ಹಾಗೂ ರಂಜಾನ್ ಹಬ್ಬ ಕಾರಣ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ರಜೆಯನ್ನು ವಿಸ್ತರಣೆ ಮಾಡಲು ಆಗುವುದಿಲ್ಲ ಎಂದು ಸಂಸ್ಥೆ ತಿಳಿಸಿತ್ತು. ಪರಿಣಾಮ ಸರತ್ಕಲ್ ಮೂಲದ ಸುಧೀಂದ್ರ ಅಂತಿಮವಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರಿನತ್ತ ಆಗಮಿಸಿದ್ದಾರೆ.

ಎಂಬಿಎ ಪದವಿ ಪಡೆದಿರುವ ಸುಧೀಂದ್ರ ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಸಿಡ್ನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಪಂಚದ ಹಲವು ಜನರ ಮಧ್ಯೆ ಇದ್ದೆ. ಇದರಲ್ಲಿ ಯುರೋಪಿಯನ್ಸ್, ಪಾಕಿಸ್ತಾನಿಗಳು ಕೂಡ ಇದ್ದರು. ಅವರು ತಮ್ಮೊಂದಿಗೆ ಮಾತನಾಡುತ್ತಾ ಭಾರತಕ್ಕೆ ಉತ್ತಮ ಭವಿಷ್ಯ ಇದೆ ಎಂದು ತಿಳಿಸಿದಾಗ ನನಗೆ ಹೆಮ್ಮೆ ಆಗುತ್ತಿತ್ತು. ಬದಲಾಗುತ್ತಿರುವ ಭಾರತದ ಬಗ್ಗೆ ಪ್ರಧಾನಿ ಮೋದಿ ಅವರ ಕೊಡುಗೆ ಹೆಚ್ಚಿದೆ. ಆದ್ದರಿಂದ ನಾನು ದೇಶದ ಗಡಿ ಕಾಯುವ ಸೈನಿಕನಾಗದಿದ್ದರು ಕೂಡ ಜವಾಬ್ದಾರಿಯುತ ಪ್ರಜೆಯಾಗಿ ಮತ ಚಲಾಯಿಸುವ ಮೂಲಕ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಕೆಲಸ ತೊರೆದ ಬಗ್ಗೆ ನನಗೆ ಯಾವುದೇ ರೀತಿಯ ಯೋಚನೆ ಇಲ್ಲ. ಏಕೆಂದರೆ ನಾನು ಮತ್ತೊಂದು ಕೆಲಸವನ್ನು ಪಡೆಯಬಲ್ಲೆ. ಆಸ್ಟ್ರೇಲಿಯಾದಲ್ಲಿ ನಾನು ಶಾಶ್ವತ ನಿವಾಸದ ಕಾರ್ಡ್ ಹೊಂದಿದ್ದು, ಏರ್ ಪೋರ್ಟ್ ನಲ್ಲಿ ಕಾರ್ಯನಿರ್ವಹಿಸುವ ಮೊದಲು ನಾನು ಬೇರೆಡೆ ಕಾರ್ಯನಿರ್ವಹಿಸುತ್ತಿದ್ದೆ ಎಂದು ಹೇಳಿದ್ದಾರೆ. ಸುಧೀಂದ್ರ ಅವರು ಆಸ್ಟ್ರೇಲಿಯಾ ಪ್ರಜೆ ಫಿಜಿ ಎಂಬವರನ್ನು ವಿವಾಹವಾಗಿದ್ದು, ಪರಿಣಾಮ ಅವರಿಗೆ ಶಾಶ್ವತ ನಿವಾಸದ ಕಾರ್ಡ್ ಲಭ್ಯವಾಗಿದೆ.

ಮುಖ್ಯವಾಗಿ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಹೊಸಬೆಟ್ಟು ಮತ ಕ್ಷೇತ್ರದಲ್ಲಿ ಸುಧೀಂದ್ರ ಮೊದಲ ಮತದಾನ ಮಾಡಿದ ವ್ಯಕ್ತಿಯಾಗಿದ್ದಾರೆ. 2014 ರ ಏಪ್ರಿಲ್ 17 ರಂದು ನಡೆದ ಮತದಾನದಲ್ಲಿ ಭಾವಹಿಸಲು ಹೆಬ್ಬಾರ್ 6 ಗಂಟೆ ಪ್ರಯಾಣಿಸಿ ಬೆಂಗಳೂರಿಗೆ ಆಗಮಿಸಿದ್ದರು. ಆ ಬಳಿಕ ಮತಗಟ್ಟೆಗೆ ತೆರಳಿ ಮೊದಲಿಗರಾಗಿ ಮತ ಚಲಾಯಿಸಿದ್ದರು.

ಉಳಿದಂತೆ ಸುಧೀಂದ್ರ ಮೇ 23ರ ಚುನಾವಣಾ ಫಲಿತಾಂಶದವರೆಗೂ ಮಂಗಳೂರಿನಲ್ಲೇ ಇರಲಿದ್ದಾರೆ. ಬಳಿಕ ಆಸ್ಟ್ರೇಲಿಯಾಗೆ ತೆರಳಿ ಹೊಸ ಕೆಲಸ ಹುಡುಕಾಟ ನಡೆಸುವ ಚಿಂತನೆಯನ್ನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *