ಮೋದಿ ಸುನಾಮಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್!

Public TV
2 Min Read

ಬಾಗಲಕೋಟೆ/ಕೊಪ್ಪಳ: ಟಿಕೆಟ್ ಸಿಕ್ಕ ದಿನದಿಂದಲೇ ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೈ ಮುಖಂಡರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕೈ ಅಭ್ಯರ್ಥಿ ಹಾಗೂ ಮುಖಂಡರಿಗೆ ಪ್ರಧಾನಿ ಮೋದಿ ಭಯ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕ ಗಾಂಧಿ ಕರೆತರುವ ಪ್ಲಾನ್ ಮಾಡಲಾಗಿದೆ.

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಲೋಕಸಭೆಯ ಕಾವು ಹೆಚ್ಚಾಗುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ಈ ಮುಂಚೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಮತ್ತಷ್ಟು ಸರಳ ಮಾಡಲು ಇಂದು ಗಂಗಾವತಿ ನಗರಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಎಫೆಕ್ಟ್ ಆಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಇನ್ನು ಮೋದಿ ಕಾರ್ಯಕ್ರಮ ಗಂಗಾವತಿಯಲ್ಲಿ ನಡೆಯುವುದು ನಿರ್ಧಾರವಾಗುತ್ತಲೇ ಇತ್ತ ಕಾಂಗ್ರೆಸ್ ನಾಯಕರಿಗೆ ಟೆನ್ಶನ್ ಶುರುವಾಗಿದೆ. ಮೋದಿ ಕಾರ್ಯಕ್ರಮಕ್ಕೆ ಕೌಂಟರ್ ಆಗಿ ಕೊಪ್ಪಳ ಕ್ಷೇತ್ರಕ್ಕೆ ಪ್ರಿಯಾಂಕ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಕರೆಸುವ ಕಸರತ್ತು ನಡೆಸಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯರ ಮುಂದೆ ಈ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರ ಕೂಡ ಈ ಬಾರಿಯ ಪ್ರತಿಷ್ಠಿತ ಚುನಾವಣಾ ಅಖಾಡ. ಯಾಕೆಂದರೆ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ. ಅಲ್ಲದೇ ಸಮನ್ವಯ ಸಮಿತಿ ಅಧ್ಯಕ್ಷ. ಆದ್ದರಿಂದ ಈ ಚುನಾವಣೆಯಲ್ಲಿ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಸಿದ್ದರಾಮಯ್ಯನವರ ಹೆಗಲ ಮೇಲಿದೆ. ಇದಕ್ಕಾಗಿ ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ ಸಿದ್ದರಾಮಯ್ಯ ಸಮಾವೇಶ ಮಾಡುವ ಮೂಲಕ ಮತಬೇಟೆ ಶುರು ಮಾಡಿದ್ದಾರೆ.

ಇದೇ 18ಕ್ಕೆ ಪ್ರಧಾನಿ ಮೋದಿ ಆಗಮಿಸುವ ಸಾಧ್ಯತೆಯಿದ್ದು, ವೀಣಾ ಕಾಶಪ್ಪನವರ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಮೋದಿ ಭಯ ಶುರುವಾಗಿದೆ ಎನ್ನಲಾಗುತ್ತಿದೆ. ಮೋದಿ ಭಯ ನಮಗಿಲ್ಲ ಎಂದು ಮೇಲ್ಮಾತಿನಲ್ಲಿ ಹೇಳುತ್ತಿರುವ ವೀಣಾ ಕಾಶಪ್ಪನವರ ಹಾಗೂ ಮುಖಂಡರು, ಮೋದಿ ಪ್ರಚಾರಕ್ಕೆ ಠಕ್ಕರ್ ಕೊಡಲು ಪ್ರಿಯಾಂಕ ಗಾಂಧಿ ಇಲ್ಲವೇ ಇತರೆ ಮುಖಂಡರನ್ನು ಜಿಲ್ಲೆಗೆ ಕರೆತರಲು ಚಿಂತನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *