ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಬ್ಬದ ದಿನವೂ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದು, ಗೆದ್ದ ಮೇಲೆ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಇದೀಗ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಮಂಡ್ಯದ ಶಂಕರನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈ ಮೊದಲೇ ಸ್ಪಷ್ಟಪಡಿಸಿದ್ದೀನಿ. ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧಿಗಳು ದಿನಾ ಒಂದೊಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದು ದಿನ ಬಿಜೆಪಿ ಅಭ್ಯರ್ಥಿ, ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಅಂದರು. ಬೇಕಾದರೆ ಜೆಡಿಎಸ್ ಅಭ್ಯರ್ಥಿ ಎಂದೂ ಹೇಳುತ್ತಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ನನಗೆ ಯಾರು ಸಪೋರ್ಟ್ ಮಾಡುತ್ತಾರೋ ಅವರು ಯಾವುದೇ ಷರತ್ತು ಹಾಕದೆ ಬೆಂಬಲ ನೀಡುತ್ತಿದ್ದಾರೆ ಎಂದರು.
ನಾನು ಜನರಿಗಾಗಿ ನಿಂತಿದ್ದೇನೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕಾದರೂ ಜನರ ಅಭಿಪ್ರಾಯವನ್ನು ಕೇಳುತ್ತೇನೆ. ಜೆಡಿಎಸ್ ನವರ ತಂತ್ರ-ಪ್ರತಿತಂತ್ರಗಳಿಗೆ ಜನತಂತ್ರವೇ ಉತ್ತರವಾಗಿದೆ. ತುಂಬಾ ಕಡಿಮೆ ಸಮಯವಿದೆ ಹೀಗಾಗಿ ಹಬ್ಬದ ದಿನವೂ ಪ್ರಚಾರಕ್ಕೆ ಬಂದಿದ್ದೀನಿ ಎಂದರು.
ಆರೋಪಗಳು ಆರೋಪಗಳಾಗಿಯೇ ಉಳಿದುಕೊಳ್ಳುತ್ತವೆ. ಮಂಡ್ಯದಲ್ಲಿ ಇರಲೇಬೇಕು ಎಂದು ಜನರ ಅಭಿಪ್ರಾಯದ ಮೇಲೆ ಚುನಾವಣೆಗೆ ನಿಂತಿದ್ದೇನೆ. ಗೆದ್ದ ಮೇಲೆ ಮಂಡ್ಯ ಬಿಟ್ಟು ಹೋದರೆ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಚುನಾವಣೆ ಬಂದರೆ ಸಾಕು ಆರೋಪ ಮಾಡುವುದು ಕೆಲವರಿಗೆ ಅಭ್ಯಾಸವಾಗಿದೆ. ಮಂಡ್ಯ ಬಿಟ್ಟು ಹೋಗಲೂ ಕಾರಣವೇ ಇಲ್ಲ. ಗೆದ್ದು ಮನೆಯಲ್ಲಿ ಕುಳಿತುಕೊಳ್ಳಲು ಅರ್ಥವೇ ಇಲ್ಲ. ಅವರು ಇದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನೂ ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆ ಅವರಿಗಿತ್ತು. ಹೀಗಾಗಿ ಅವರು ಆಸೆ ನೆರವೇರಿಸಲು ಬಂದಿದ್ದೇನೆ ಎಂದರು.
ಆದಾಯ ತೆರಿಗೆ ಇಲಾಖೆಯವರಿಗೆ ಹಣ ಎಲ್ಲಿದೆ ಎಂದು ಮಾಹಿತಿ ತಿಳಿಯುತ್ತದೋ ಅಲ್ಲಿ ಹೋಗಿ ರೇಡ್ ಮಾಡುತ್ತಾರೆ. ನಮ್ಮ ಮನೆ ಮೇಲೆ ದಾಳಿ ಮಾಡಿದರೆ ಅವರಿಗೆ ಏನೂ ಸಿಗಲ್ಲ. ಐಟಿ ಅಧಿಕಾರಿಗಳು ಟೀ, ಕಾಫಿ ಕುಡಿದುಕೊಂಡು ವಾಪಸ್ ಹೋಗಬೇಕಷ್ಟೆ ಎಂದರು.