ಮಾಟ-ಮಂತ್ರ ಮಾಡಲು ಸ್ಮಶಾನಕ್ಕೆ ಹೋದ ವ್ಯಕ್ತಿ ಸಾವು!

Public TV
1 Min Read

ಧಾರವಾಡ: ಜನ 21ನೇ ಶತಮಾನಕ್ಕೆ ಕಾಲಿಟ್ಟರೂ ಈಗಲೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಇಂಥದ್ದೊಂದು ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ರಾತ್ರಿ ವ್ಯಕ್ತಿಯೋರ್ವ ಸ್ಮಶಾನದಲ್ಲಿ ಮಾಟಮಂತ್ರ ಮಾಡಲು ಹೋಗಿ ಅಲ್ಲೇ ಸಾವನ್ನಪ್ಪಿದ ಘಟನೆ ಇದೆ.

ಆರ್‍ಎಸ್ ನಮಶಿವಾಯ ಮೃತ ವ್ಯಕ್ತಿಯಾಗಿದ್ದು, ಇವರು ಧಾರವಾಡ ನಗರದ ಜನ್ನತನಗರ ಬಳಿ ಇರುವ ಸ್ಮಶಾನದಲ್ಲಿ ಸಾವನ್ನಪ್ಪಿದ್ದಾರೆ. ನಗರದ ಗಾಂಧಿನಗರದ ನಿವಾಸಿಯಾದ ಇವರು, ಗುರುವಾರ ರಾತ್ರಿ ಮಾಟಮಂತ್ರ ಮಾಡುವ ಸಾಮಾಗ್ರಿಗಳನ್ನು ತೆಗೆದುಕೊಂಡು ಸ್ಮಶಾನಕ್ಕೆ ಹೋಗಿದ್ದಾರೆ. ಆ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇವರ ಶವದ ಜೊತೆ ಕಾರಿನಲ್ಲಿ ಕರಿ ಬಟ್ಟೆ ಸುತ್ತಿದ ಕೆಲವು ಸಾಮಾಗ್ರಿಗಳು ಸಿಕ್ಕಿವೆ. ವಸ್ತುಗಳನ್ನು ಮಣ್ಣು ಮಾಡಲು ಕುಡಗೋಲು ಕೂಡ ತಂದಿದ್ದ ಅವರು, ಕೆಲ ಕರಿ ದಾರ ಸುತ್ತಿದ ಫೋಟೋ ಕೂಡ ತಂದಿದ್ದಾರೆ. ಮೃತ ವ್ಯಕ್ತಿಯ ಮಗಳು ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ಘಟನೆ ತಿಳಿದ ನಂತರ ಸ್ಥಳಕ್ಕೆ ಬಂದಿದ್ದಾರೆ. ವಾಮಾಚಾರದ ಬಗ್ಗೆ ಏನೂ ಹೇಳದ ಆಕೆ, ಚುನಾವಣೆಯ ಕರ್ತವ್ಯದ ಮೇಲೆ ಕಾರವಾರದಲ್ಲಿದ್ದಾಗ ಘಟನೆ ವಿಷಯ ತಿಳಿದಿದೆ ಎಂದು ಹೇಳಿದ್ದಾರೆ.

ಬೆಳಗ್ಗೆನೇ ಈ ವ್ಯಕ್ತಿಯ ಕಾರನ್ನು ನೋಡಿದ್ದ ತ್ಯಾಜ್ಯ ವಿಲೇವಾರಿ ಘಟಕದ ಸುಪರ್‍ವೈಸರ್ ಹನುಮಂತ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿದ್ಯಾಗಿರಿ ಪೊಲೀಸರು ಶವವನ್ನ ಶವಾಗಾರಕ್ಕೆ ಸಾಗಿಸುವ ಕೆಲಸ ಮಾಡಿದ್ದಾರೆ. ಗುರುವಾರ ರಾತ್ರಿ ಸ್ಮಶಾನಕ್ಕೆ ಬಂದಾಗ ಮೃತ ವ್ಯಕ್ತಿಗೆ ಭಯದಿಂದ ಸಾವು ಆಗಿರುವ ಸಾಧ್ಯತೆ ಇದೆ. ಅಮಾವಾಸ್ಯೆ ಇರುವ ಕಾರಣ ಈ ವ್ಯಕ್ತಿ ಸ್ಮಶಾನಕ್ಕೆ ವಾಮಾಚಾರದ ವಸ್ತುಗಳನ್ನು ತಂದಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಹೇಳಲು ಮುಂದೆ ಬರುತ್ತಿಲ್ಲ.

ಈ ಘಟನೆಗೆ ಹೇಗೆ ವ್ಯಾಖ್ಯಾನ ಮಾಡಬೇಕು ಎಂಬುದು ಯಾರಿಗೂ ತಿಳಿಯುತ್ತಿಲ್ಲ, ಆದರೆ ವಾಮಾಚಾರದ ಸಾಮಾಗ್ರಿಗಳನ್ನ ನೋಡಿ ಸ್ಥಳಕ್ಕೆ ಬಂದಿದ್ದ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *