ಸರ್ಕಾರ ಬೀಳಿಸಲು ಬಂದಿದ್ದ ಶಾಸಕರನ್ನೇ ಬೀಳಿಸ್ತೀನಿ: ಅಶ್ವಥ್ ನಾರಾಯಣ್‍ಗೆ ಡಿಕೆಶಿ ಟಾಂಗ್

Public TV
2 Min Read

– ಬೆಂಗಳೂರಿಗೆ ಉತ್ತರ ಕ್ಷೇತ್ರಕ್ಕೆ ಸದಾನಂದಗೌಡರ ಕೊಡುಗೆ ಏನು?
– ಬಿಜೆಪಿ ಅಭ್ಯರ್ಥಿ ಆರ್‌ಎಸ್‌ಎಸ್ ಟೆಂಟ್‍ಗೆ ಮರಳುವುದು ಗ್ಯಾರಂಟಿ
– ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ

ಬೆಂಗಳೂರು: ಇಲ್ಲಿನ ಶಾಸಕರು ಮೈತ್ರಿ ಸರ್ಕಾರವನ್ನೇ ಬೀಳಿಸಲು ಪ್ರಯತ್ನ ಮಾಡುತ್ತಿದ್ದರು. ಈಗೇನೂ ಹೇಳಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ಬರುತ್ತೇನೆ. ಆಗ ವಿಶೇಷ ಗಮನಹರಿಸಿ ಶಾಸಕರನ್ನೇ ಬದಲಾಯಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮಲ್ಲೇಶ್ವರಂ ಕ್ಷೇತ್ರದ ಸುಬ್ರಮಣ್ಯಪುರದಲ್ಲಿನ ಅರಳಿಕಟ್ಟೆ ಮೈದಾನದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕೋಡ ಮಾರಿ ಎಂದು ಹೇಳುತ್ತಾರೆ. ಕೇಂದ್ರ ಸಚಿವ ಸದಾನಂದಗೌಡ ಅವರು ಕೂಡ ಪಕೋಡ ಮಾರುವುದು ಒಂದು ಉದ್ಯೋಗ ಎನ್ನುತ್ತಾರೆ. ಇಂತಹ ನಾಯಕರು ಮತ್ತೇ ಸಂಸದರಾಗಬೇಕಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಪ್ರಶ್ನಿಸಿದರು.

ಡಿ.ವಿ.ಸದಾನಂದಗೌಡ ಅವರು ಮಂಗಳೂರಿನಿಂದ ಬಂದವರು. ಮಂಗಳೂರಿನ ವಿಜಯಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜೊತೆ ಸೇರಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಸಹಿ ಮಾಡಿ ಕೊಟ್ಟಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ, ಆದರೆ ಕಾಂಗ್ರೆಸ್‍ಗೆ ಮತ ಹಾಕುತ್ತೇನೆ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಇಲ್ಲಿನ ಸ್ಥಳೀಯರು ನನಗೆ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಏರ್ ಸ್ಟ್ರೈಕ್ ಮಾಡಿದ್ದರಿಂದ ನಾವು 22 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಭಾರತೀಯ ಸೈನಿಕರ ಸಾಧನೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದಲ್ಲಿ ಈ ಬಾರಿ 2 ಸೀಟು ಬಂದರೆ ಹೆಚ್ಚು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮಗ ರಾಘವೇಂದ್ರ ಗೆಲ್ಲುವುದಿಲ್ಲ. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ 13 ಸಾವಿರ ಕೋಟಿ ರೂ. ಅನುಧಾನ ಕೊಟ್ಟಿದ್ದರು. ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿಯವರು 23 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನ ಕೈಗೆತ್ತಿಕೊಂಡಿದ್ದಾರೆ. ಸಚಿವ ಕೃಷ್ಣಭೈರೇಗೌಡ ಅವರು ಬಹಳ ಸಜ್ಜನಿಕೆ ವ್ಯಕ್ತಿ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಬದಲಾವಣೆ ತರಬೇಕು. ನಾವೆಲ್ಲಾ ಹಿಂದೂ, ನಾವು ಮುಂದು ಅಂತ ಬಿಜೆಪಿಯವರು ಹೇಳುತ್ತಾರೆ. ನಾವು ಬೇರೆಯವರಾ? ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ಸ್ ಎಲ್ಲಾ ಒಂದು ಅಂತ ಹೇಳುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿಗೆ ಉತ್ತರ ಕ್ಷೇತ್ರಕ್ಕೆ ಸಚಿವ ಸದಾನಂದಗೌಡ ಅವರ ಕೊಡುಗೆ ಏನು? ಕೇಂದ್ರ ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನ ಬಿಟ್ಟು ಆರ್‌ಎಸ್‌ಎಸ್‌ನ ಒಬ್ಬ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹರಿಪ್ರಸಾದ್ ಸಂಸತ್ತಿಗೆ ಹೋಗುತ್ತಾರೆ. ಬಿಜೆಪಿ ಅಭ್ಯರ್ಥಿ ಆರ್‌ಎಸ್‌ಎಸ್‌ ಟೆಂಟ್‍ಗೆ ಮರಳುವುದು ಗ್ಯಾರಂಟಿ. ಈ ಮೂಲಕ ಬೆಂಗಳೂರಿನ ನಾಲ್ಕು ಕ್ಷೇತ್ರದಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೇ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *