ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

Public TV
1 Min Read

– ನಿಮ್ಮ ಅಜ್ಜಿ, ತಾಯಿ ರಾಜ್ಯದಿಂದ ಗೆದ್ದು ಇಲ್ಲಿಗೆ ಕೊಟ್ಟಿದ್ದೇನು?
– ರಾಹುಲ್ ಗಾಂಧಿ ವಿರುದ್ಧ ಸಿಟಿ ರವಿ ವಾಗ್ದಾಳಿ

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್‍ಗೆ ಪ್ರಶ್ನೆ ಮಾಡಿದ್ದಾರೆ.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆದಾಡುವ ಸುಳ್ಳಿನ ಯಂತ್ರ. ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಠಾವೋ ಅಂತ ಹೇಳಿದರು. ಕಾಂಗ್ರೆಸ್‍ಗೆ ಬಡವರು ಚುನಾವಣಾ ಸರಕು. ಬಡವರ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಬಡತನವನ್ನ ನಿವಾರಿಸಿಕೊಂಡಿದ್ದಾರೆ. ಕಾಂಗ್ರೆಸ್ ಬದುಕಿಕೊಳ್ಳಲು ನ್ಯಾಯ್ ಯೋಜನೆ ಆಶ್ವಾಸನೆ ಕೊಟ್ಟಿದೆ. ಎಲ್ಲ ಕಾಲದಲ್ಲೂ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಅಜ್ಜಿ ಇಂದಿರಾ ಗಾಂಧಿ, ಅಪ್ಪ ರಾಜೀವ್ ಗಾಂಧಿ, ಅಮ್ಮ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರೂ ಜನರನ್ನು ಮೂರ್ಖರನ್ನಾಗಿ ಮಾಡಿದ್ದರು. ಆದರೆ ನೀವು ಈಗ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತವನ್ನು ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್‍ನವರು ಆರೋಪ ಮಾಡುತ್ತಾರೆ. ಆದರೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಇಂದಿರಾ ಗಾಂಧಿ ಹಾಗೂ ಬಳ್ಳಾರಿಯಿಂದ ಗೆದ್ದು ಹೋದ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತದ ನಾಯಕರಾದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್, ನೀಲಂ ಸಂಜೀವ್ ರೆಡ್ಡಿ, ದೇವರಾಜ್ ಅರಸು ಅವರನ್ನು ಕಾಂಗ್ರೆಸ್‍ನವರು ಏನು ಮಾಡಿದರು? ಎಚ್.ಡಿ.ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *