ನಾನು, ಎಚ್‍ಡಿಕೆ ಅಧಿಕಾರ ಸ್ವೀಕರಿಸಿದಾಗ್ಲೇ ಮೋದಿ ಸೋಲಿಸಲು ಚಿಂತನೆ ಮಾಡಿದ್ವಿ: ಪರಮೇಶ್ವರ್

Public TV
2 Min Read

– ಎಚ್‍ಡಿಡಿ ಕೇವಲ ತುಮಕೂರು ಕ್ಷೇತ್ರಕ್ಕೆ ಸೀಮಿತವಲ್ಲ
– ಮೋದಿ ಗೋದ್ರಾದಲ್ಲಿ 3 ಸಾವಿರ ಮುಸ್ಲಿಮರನ್ನ ಕೊಲೆ ಮಾಡಿದ್ರು

ತುಮಕೂರು: ಸಿಎಂ ಕುಮಾರಸ್ವಾಮಿ ಹಾಗೂ ನಾನು ಅಧಿಕಾರ ಸ್ವೀಕರಿಸಿದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಚಿಂತನೆ ಮಾಡಿದ್ದೇವು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಮೈತ್ರಿ ಅಭ್ಯರ್ಥಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಸೋಲಿಸುವುದು ನಮ್ಮ ಗುರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದು ನಮ್ಮ ಚಿಂತನೆಯಾಗಿದೆ ಎಂದರು.

ದೇಶದ ಪ್ರತಿಯೊಬ್ಬ ಪ್ರಜೆ ನೆಮ್ಮದಿಯಿಂದ ಬದುಕಬೇಕು. ಪ್ರತಿಯೊಬ್ಬರಿಗೂ ಮುಕ್ತ ಅವಕಾಶ ಸಿಗಬೇಕು ಎಂದು ಸಂವಿಧಾನದ ಮೊದಲನೇ ಪುಟದಲ್ಲಿ ಬರೆಯಲಾಗಿದೆ. ಆದರೆ ಬಿಜೆಪಿಯವರು ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದ ಅವರು, ಎಚ್.ಡಿ.ದೇವೇಗೌಡ ಅವರನ್ನು ಕೇವಲ ತುಮಕೂರು ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ. ಅವರು ದೇಶದ ಮಾಜಿ ಪ್ರಧಾನಿ. ತುಮಕೂರು ಅಭಿವೃದ್ಧಿಯನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ನಾವು ಸುಭದ್ರವಾಗಿದ್ದೇವೆ. ಬಿಜೆಪಿ ಅಭ್ಯರ್ಥಿ ಕೇವಲ ನೀರಾವರಿ ಅಂತ ಮಾತನಾಡುತ್ತಿದ್ದಾರೆ. ದೇಶದ ಬಗ್ಗೆ ಮಾತನಾಡಿ. ನಿಮಗೆ ದೇಶದ ಕನಸು ಗೊತ್ತಿಲ್ಲ. ನಿಮಗೆ ಗೊತ್ತಿರುವುದು ಕೇವಲ ತುಮಕೂರು ಮಾತ್ರ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದರು.

ಇಂಡಿಯಾ ಶೈನಿಂಗ್ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಏನು ಮಾಡಿದ್ರು ಸ್ವಾಮಿ? 10 ಕೋಟಿ ಜನರಿಗೆ ಉದ್ಯೋಗ ಕೊಡುತ್ತೇವೆ ಅಂತ ಭರವಸೆ ನೀಡಿದ್ದರು. ಉದ್ಯೋಗ ಕೊಟ್ಟರೇ? ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಪ್ರಧಾನಿ ಮೋದಿ ಪರಿಹಾರ ನೀಡಿದ್ದಾರಾ ಎಂದು ಪ್ರಶ್ನಿದರು.

ಕರ್ನಾಟಕದಲ್ಲಿ 40 ಸಾವಿರ ಕೋಟಿ ರೂ. ರೈತರ ಸಾಲವಿದೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ನೀವು ಲೆಕ್ಕಿಸಲಿಲ್ಲ. ಬ್ಯಾಂಕ್‍ಗಳನ್ನು ಲೂಟಿ ಮಾಡಿ, ಸರ್ಕಾರಕ್ಕೆ ದ್ರೋಹ ಮಾಡಿ ದೇಶ ಬಿಟ್ಟವರನ್ನು ಬಂಧಿಸಬೇಕಿತ್ತು. ನರೇಂದ್ರ ಮೋದಿ ಗುಜರಾತ್‍ನ ಮುಖ್ಯಮಂತ್ರಿಯಾದ್ದಾಗ ಗೋದ್ರಾದಲ್ಲಿ 3 ಸಾವಿರ ಮುಸ್ಲಿಮರನ್ನ ಕೊಲೆ ಮಾಡಿದ್ದರು. ಘಟನೆಯ ಬಗ್ಗೆ ಪ್ರಧಾನಿ ಮೋದಿ ಕ್ಷಮೆ ಕೇಳಿದ್ರಾ? ಅಂದಿನಿಂದ ಇವತ್ತಿನವರೆಗೂ ಆರ್‍ಎಸ್‍ಎಸ್‍ನವರ ಮುಖವಾಡ ಕಳಚಿ ಬೀಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪೆಟ್ರೋಲ್ ದರ, ರಫೇಲ್ ಡೀಲ್, ಏನಾಯಿತು? 40 ಸಾವಿರ ಕೋಟಿ ರೂ. ರಫೇಲ್ ಡೀಲ್‍ನ ಲೆಕ್ಕ ಸಿಗಲಿಲ್ಲವೇ? ನೀರವ್ ಮೋದಿ ಎಷ್ಟು ಹಣ ಹೊಡೆದುಕೊಂಡು ಹೋದರು? ಜನರಿಗೆ ಮೋಸ ಮಾಡಿದರೆ ತಿಳಿಯಲ್ಲ ಅಂದುಕೊಂಡಿದ್ದಾರೆ. ಹೀಗಾಗಿ ಈ ಎಲ್ಲ ವಿಚಾರಗಳನ್ನು ಪ್ರಶ್ನಿಸಲು ಎಚ್.ಡಿ.ದೇವೆಗೌಡರನ್ನು ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *