ಭಾರತ ತಿಳಿಸಿದ್ದ 22 ಪ್ರದೇಶಗಳಲ್ಲಿ ಉಗ್ರರ ಕ್ಯಾಂಪ್‍ಗಳೇ ಇಲ್ಲ: ಪಾಕಿಸ್ತಾನ

Public TV
1 Min Read

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದ ಪಾಕ್ ಮತ್ತೊಮ್ಮೆ ತನ್ನ ಕುತಂತ್ರಿ ಬುದ್ಧಿಯನ್ನು ಪ್ರದರ್ಶನ ಮಾಡಿದೆ.

ಪುಲ್ವಾಮಾ ದಾಳಿಯ ಬಳಿಕ ತನಿಖೆ ನಡೆಸಲು ಭಾರತದಿಂದ ಪಾಕಿಸ್ತಾನ ಸಾಕ್ಷಿಗಳನ್ನು ಕೇಳಿತ್ತು. ಇದರ ಅನ್ವಯ ಭಾರತ ಪಾಕ್ ನೆಲದಲ್ಲಿ ಇರುವ ಉಗ್ರರ ಅಡುಗುತಾಣಗಳ ಬಗ್ಗೆ ಮಾಹಿತಿ ನೀಡಿತ್ತು. ಭಾರತದ ನೀಡಿದ ಮಾಹಿತಿಗೆ ತನಿಖೆ ನಡೆಸಿ ಪ್ರತಿಕ್ರಿಯೆ ನೀಡಿರುವ ಪಾಕ್, ಭಾರತ ಉಲ್ಲೇಖ ಮಾಡಿದ್ದ ಸ್ಥಳಗಳಲ್ಲಿ ಯಾವುದೇ ಉಗ್ರರ ಕೇಂದ್ರಗಳು ಇಲ್ಲ ಎಂದು ಮಾಹಿತಿ ನೀಡಿದೆ.

ಪಾಕ್, ಭಾರತದ ಧೂತವಾಸ ಕಚೇರಿಗೆ ಈ ಕುರಿತ ಮಾಹಿತಿಯನ್ನು ನೀಡಿದ್ದು, ಪುಲ್ವಾಮಾ ದಾಳಿಯಲ್ಲಿ ನಮ್ಮ ಮಾತ್ರ ಯಾವುದು ಇಲ್ಲ ಎಂದು ಸ್ಪಷ್ಟನೆಯನ್ನು ನೀಡಿದೆ. ಅಲ್ಲದೇ ಉಗ್ರರು ಇದ್ದರೆ ಎನ್ನಲಾಗಿರುವ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲು ಕೂಡ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

ಭಾರತದ ನೀಡಿದ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದ್ದು, ಉಗ್ರರು ಸಂವಹನ ನಡೆಸಿದ ವಿಡಿಯೋ, ಸಂದೇಶಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ವರದಿಯಲ್ಲಿ ನೀಡಿದ್ದ 54 ಮಂದಿಯ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಅವರಿಗೆ ದಾಳಿಯಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನ ತನ್ನ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದೆ.

ಭಯೋತ್ಪಾದಕ ದಾಳಿಯ ಬಳಿಕ, ಜೈಶ್ ಎ ಮೊಹಮ್ಮದ್ ಸಂಘಟನೆ ತನ್ನ ಕೃತ್ಯ ಎಂದು ಹೊಣೆಹೊತ್ತುಕೊಂಡಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಭಾರತ ಪಾಕಿಸ್ತಾನದಲ್ಲಿ ಇರುವ ಉಗ್ರರ ಕುರಿತ ಮಾಹಿತಿಯನ್ನು ಫೆ. 27 ರಂದು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *