‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

Public TV
2 Min Read

– ತೇಜಸ್ವಿ ಸೂರ್ಯ ಪರ ಬಿಎಲ್ ಸಂತೋಷ್ ಬ್ಯಾಟಿಂಗ್
– ಸಂತೋಷ್ ಮಾತಿಗೆ ಹೈಕಮಾಂಡ್ ಮಣೆ

ಬೆಂಗಳೂರು: ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಕಾರ್ಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಯಶಸ್ವಿಯಾಗಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾದ ಬಳಿಕ ಈ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದ ಬಗ್ಗೆ ರಾಜ್ಯ ನಾಯಕರು ಸಭೆ ನಡೆಸಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

ದೆಹಲಿಯಲ್ಲಿರುವ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಬಿಎಲ್ ಸಂತೋಷ್ ಅವರು ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಮುಂದಿನ ಕಥೆಯೇನು? ಇನ್ನು ಹಲವು ವರ್ಷ ಪಕ್ಷ ಕಟ್ಟಿ, ಬೆಳೆಸುವವರು ಯಾರು ಎಂದು ಹೇಳಿ ತೇಜಸ್ವಿ ಸೂರ್ಯ ಹೆಸರನ್ನೂ ಪರಿಗಣಿಸಬಹುದು ಎಂದು ನಾಯಕರಿಗೆ ಮನವರಿಕೆ ಮಾಡಿದ್ದಾರೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಯೂ ಹರಿದಾಡತೊಡಗಿ ಈ ಕ್ಷೇತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಅಂತಿಮವಾಗಿ ಹೈಕಮಾಂಡ್ ಸಂತೋಷ್ ಹೇಳಿದಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಒಂದು ಕಾಲದಲ್ಲಿ ಅನಂತ್ ಕುಮಾರ್ ಟಿಕೆಟ್ ಘೋಷಣೆ ಮಾಡುತ್ತಿದ್ದರು. ಆದರೆ ಇಂದು ಒಂದು ಟಿಕೆಟ್‍ಗಾಗಿ ಕಡೆ ದಿನದವರೆಗೂ ತೇಜಸ್ವಿನಿ ಅನಂತಕುಮಾರ್ ಕಾದಿದ್ದರು. ಅಂದು ಅನಂತಕುಮಾರ್ ಜತೆ ಸಂತೋಷ್ ಚುನಾವಣಾ ತಂತ್ರಗಾರಿಕೆ ಮಾಡುತ್ತಿದ್ದರು. ಆದರೆ ಇಂದು ಬಿ.ಎಲ್.ಸಂತೋಷ್ ಚದುರಾಂಗದಾಟದಲ್ಲಿ ಎಲ್ಲವೂ ಉಲ್ಟಾವಾಗಿದೆ ಎನ್ನುವ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದರ ಜೊತೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ನಿಧನರಾದರೂ ಪತ್ನಿಗೆ ಟಿಕೆಟ್ ನೀಡದೇ ಇರುವುದು ಎಷ್ಟು ಸರಿ ಎನ್ನುವ ಮಾತು ಕೇಳಿ ಬಂದಿದೆ.

ನನಗೆ ನಂಬಲು ಸಾಧ್ಯವಾಗುತ್ತಿಲ್ಲ. 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳು. ಈ ರೀತಿ ಟಿಕೆಟ್ ಬಿಜೆಪಿ ಪಕ್ಷದಲ್ಲಿ ಮಾತ್ರ ಸಿಗುತ್ತದೆ. ನನ್ನನ್ನು ಬೆಂಬಲಿಸಿದ ನಾಯಕರಾದ ಮುಕುಂದ ಮತ್ತು ಬಿಎಲ್ ಸಂತೋಷ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *