ನನ್ನದು ಬಿಡಿ ಪರವಾಗಿಲ್ಲ, ಅಡ್ವಾಣಿಜೀಗೆ ಮೋಸವಾಯ್ತು: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ

Public TV
1 Min Read

ನವದೆಹಲಿ: ನನಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೆ ಪರವಾಗಿಲ್ಲ. ಆದ್ರೆ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಪಕ್ಷ ದೊಡ್ಡ ಅನ್ಯಾಯವನ್ನು ಮಾಡಿದೆ ಎಂದು ಟಿಕೆಟ್ ವಂಚಿತ, ಬಿಜೆಪಿ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಪರೋಕ್ಷವಾಗಿ ಹೈಕಮಾಂಡ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಬಿಹಾರದ 17 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಟ್ನಾ ಸಂಸದ ಶತ್ರುಘ್ನ ಸಿನ್ಹಾರಿಗೆ ಟಿಕೆಟ್ ನೀಡಿಲ್ಲ. ಅಂತೆಯೇ ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ ಸ್ಪರ್ಧಿಸುತ್ತಿದ್ದ ಗುಜರಾತ್ ರಾಜ್ಯದ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಣಕ್ಕಿಳಿಯಲಿದ್ದಾರೆ.

ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿನ್ಹಾ, ನ್ಯೂಟನ್ ನಿಯಮದಂತೆ ಕ್ರಿಯೆಗೆ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ಸಿಗಲಿದೆ. ಇಂದಿನವರೆಗೂ ಬಿಜೆಪಿಯಲ್ಲಿಯೇ ಇದ್ದೇನೆ, ನಂತರ ಏನು ಆಗುತ್ತೆ ಎಂಬುದನ್ನು ಕಾದು ನೋಡಿ ಎಂದು ಹೇಳುವ ಮೂಲಕ ಬಿಜೆಪಿ ತೊರೆಯುವ ಸುಳಿವನ್ನು ನೀಡಿದ್ದಾರೆ.

ಅಡ್ವಾಣಿಜೀ ಬಿಜೆಪಿಯ ಬಹುತೇಕ ನಾಯಕರ ರಾಜಕೀಯ ಗುರುವಾಗಿದ್ದಾರೆ. ಆದ್ರೆ ಅವರಿಗೆ ಪಕ್ಷ ಅನ್ಯಾಯ ಮಾಡಿದೆ. ಈ ಮೊದಲು ಯಶವಂತ್ ಸಿನ್ಹಾ, ಜಸ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರಿಗೆ ಇದೇ ರೀತಿ ಮೋಸವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅಡ್ವಾಣಿಗೆ ಅನ್ಯಾಯ:
ಪಕ್ಷದ ಹಿರಿಯ ನಾಯಕರಿಗೆ ಈ ರೀತಿ ಅನ್ಯಾಯವಾಗಿದ್ದನ್ನು ನಾನು ಖಂಡಿಸುತ್ತೇನೆ. ನೀವು ಅವರಿಂದ ಏನೇ ಬರೆದುಕೊಂಡು ಬಂದು ತೋರಿಸಿದರೂ ಜನರು ನಂಬಲ್ಲ. ಕೇವಲ ನಿಮ್ಮ ಬಲವಂತಕ್ಕಾಗಿ ಬರೆದುಕೊಡಬಹುದೇ ಹೊರತು, ಮನಸ್ಸಿನಿಂದ ಬರೆದುಕೊಡಲ್ಲ. ಅಡ್ವಾಣಿಜೀಯನ್ನು ರಾಷ್ಟ್ರಪತಿಗಳನ್ನು ಮಾಡಲು ಹಿಂದೇಟು ಹಾಕುವ ಮೂಲಕ ಯಾವ ಪದವಿಗೂ ಅವರು ಸೂಕ್ತವಲ್ಲ ಎಂಬ ಸಂದೇಶವನ್ನು ರವಾನಿಸುತ್ತೀರಿ. ಅಡ್ವಾಣಿ ಅವರೊಂದಿಗೆ ಪಕ್ಷ ಈ ರೀತಿ ನಡೆದುಕೊಳ್ಳಬಾರದಿತ್ತು. ನನ್ನ ವಿಚಾರ ಬಿಡಿ, ನಾನು ಹೇಗೋ ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *