ರೋಮಾಂಚಕ ಆರಂಭ ಪಡೆದ ‘ಅನನ್ಯ’ ಕನಸು!

Public TV
1 Min Read

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಕನ್ನಡದಲ್ಲಿ ಮ್ಯೂಸಿಕ್ ಆಲ್ಬಂಗಳ ಹಂಗಾಮಾ ಶುರುವಾಗಿದೆ. ಇದೀಗ ಹಲವಾರು ಹಾಡುಗಳಿಗೆ ಧ್ವನಿಯಾಗುತ್ತಲೇ ಪ್ರತಿಭಾನ್ವಿತ ಗಾಯಕಿಯಾಗಿ ಗುರುತಿಸಿಕೊಂಡಿರುವ ಅನನ್ಯಾ ಭಗತ್ ಅವರೊಂದು ಚೆಂದದ ಹಾಡೊಂದನ್ನು ರೂಪಿಸಿದ್ದಾರೆ. ಹೋಳಿ ಹಬ್ಬದಂದು ಬಿಡುಗಡೆಯಾಗಿರೋ ಈ ಕನಸಿನ ಆರಂಭಕೆ ಎಂಬ ಈ ಆಲ್ಬಂ ಸಾಂಗ್ ಈಗ ಎಲ್ಲರನ್ನೂ ಸೆಳೆದುಕೊಂಡಿದೆ.

ಅನನ್ಯಾ ಅವರ ಯೂಟ್ಯೂಬ್ ಚಾನೆಲ್ ಮೂಲಕವೇ ಹೋಳಿ ಹಬ್ಬದಂದು ಬಿಡುಗಡೆಯಾಗಿರೋ ಈ ವೀಡಿಯೋ ಸಿಂಗಲ್ ಪ್ರಯತ್ನಕ್ಕೆ ಜನ ಮಾರುಹೋಗಿದ್ದಾರೆ. ಮಲೆನಾಡಿನ ರೋಮಾಂಚಕ ವಾತಾವರಣದಲ್ಲಿ ಚಿತ್ರೀಕರಿಸಲ್ಪಟ್ಟಿರುವ ದೃಷ್ಯಗಳು, ಅನನ್ಯಾ ಭಗತ್ ಅವರ ಧ್ವನಿಯಲ್ಲಿ ಮೂಡಿ ಬಂದಿರೋ ನವಿರಾದ ಸಾಹಿತ್ಯದ ಸಾಲುಗಳೀಗ ಎಲ್ಲೆಡೆ ಹರಿದಾಡುತ್ತಿವೆ.

ಅಪ್ಪಟ ಮಲೆನಾಡಿನ ತೀರ್ಥಹಳ್ಳಿಯವರು ಅನನ್ಯಾ ಭಗತ್. ಈಗಾಗಲೇ ಒಂದಷ್ಟು ಹಾಡುಗಳ ಮೂಲಕ, ಭಿನ್ನವಾದ ಪ್ರಯತ್ನಗಳ ಮೂಲಕ ಇವರು ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಒಂದು ಮ್ಯೂಸಿಕ್ ಆಲ್ಬಂ ರೂಪಿಸಬೇಕೆಂಬ ಬಹುಕಾಲದ ಆಸೆ ಹೊಂದಿದ್ದ ಅನನ್ಯಾ ಅದರ ಆರಂಭವೆಂಬಂತೆ ಈ ಕನಸಿನ ಆರಂಭಕೆ ಎಂಬ ಈ ಹಾಡನ್ನು ರೂಪಿಸಿದ್ದಾರೆ.

ನನ್ನನ್ನು ನಾವು ಪ್ರೀತಿಸುತ್ತಾ ಅರ್ಥ ಮಾಡಿಕೊಳ್ಳಬೇಕೆನ್ನೋದು ಈ ಹಾಡಿನ ಬೇಸ್. ನೆನಪುಗಳ ಸಂತೆಯಲಿ ನೀನೇ ನೀನೇ ಬರಿ ನೀನೇ ಎಂಬ ಈ ಹಾಡು ತೀರ್ಥಹಳ್ಳಿ ಪ್ರದೇಶದ ಪ್ರಾಕೃತಿಕ ಸೌಂದರ್ಯದ ಹಿಮ್ಮೇಳದೊಂದಿಗೆ ನವಿರಾಗಿಯೇ ಮೂಡಿ ಬಂದಿದೆ. ಈ ಹಾಡಿಗೆ ಅಭಿರಾಮ್ ಸಾಹಿತ್ಯ ನೀಡಿದ್ದಾರೆ. ವಿಶ್ವಜಿತ್ ಛಾಯಾಗ್ರಹಣ, ಅಶಿಕ್ ಸಂಕಲನ ಹಾಗೂ ಶಮಂತ್ ಅವರ ನಿರ್ದೇಶನ ಈ ವೀಡಿಯೋ ಸಿಂಗಲ್ ಹಾಡಿಗಿದೆ.

ಈ ಕನಸಿನ ಆರಂಭಕೆ ಎಂಬ ನವಿರಾದ ಶೀರ್ಷಿಕೆ ಮತ್ತು ಅದಕ್ಕೆ ತಕ್ಕುದಾದ ಈ ಹಾಡು ಏಕಾಂತಕ್ಕೆ ಮಧುರ ಸಾಂಗತ್ಯ ನೀಡುವಂತಿದೆ. ಈ ಮೂಲಕವೇ ಅನೂಹ್ಯ ಉತ್ಸಾಹವೊಂದನ್ನು ಕೇಳುಗರೆಲ್ಲರಿಗೆ ತುಂಬುವಂತಿರೋ ಈ ಹಾಡಿನ ಮೂಲಕ ಅನನ್ಯಾ ಭಗತ್ ಕನಸಿನ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *