ನರಸಿಂಹಸ್ವಾಮಿ ಜಾತ್ರೆಗೆ ವಿಘ್ನವಾದ ಅರ್ಚಕರ ಜಗಳ – ಇಬ್ಬರು ಅರ್ಚಕರ ಜಗಳದಿಂದ ಹೈರಾಣಾದ ಭಕ್ತರು!

Public TV
1 Min Read

ಚಿಕ್ಕಬಳ್ಳಾಪುರ: ಇತಿಹಾಸ ಪುಣ್ಯ ಪ್ರಸಿದ್ಧ ನರಸಿಂಹಸ್ವಾಮಿ ದೇವಸ್ಥಾನದ ಪೂಜೆ ವಿಚಾರದಲ್ಲಿ ಅಲ್ಲಿರುವ ಅರ್ಚಕರಿಬ್ಬರ ಜಗಳ ಮಾಡಿಕೊಂಡಿದ್ದು, ನಾನ್ಯಾಕೆ ಮಾಡಲಿ ಅಂತ ಒಬ್ಬರಿಗೊಬ್ಬರು ಮುನಿಸಿಕೊಂಡು ಜಾತ್ರೆ ಹಾಗೂ ರಥೋತ್ಸವ ಮಾಡದೆ ಉದ್ದಟತನ ಮಾಡಿದಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಬಾರ್ಲಹಳ್ಳಿ ಹಾಗೂ ಅರಿಕೆರೆ ಗ್ರಾಮದ ಬಳಿ ಜಾಲಾರಿ ನರಸಿಂಹಸ್ವಾಮಿ ದೇವಸ್ಥಾನ ಇದೆ. ನರಸಿಂಹಸ್ವಾಮಿ ದೇವಸ್ಥಾನಕ್ಕೆ ರಾಜ್ಯ ಅಂತರ್ ರಾಜ್ಯದಿಂದ ಭಕ್ತರು ಬರುತ್ತಾರೆ. ಆದರೆ ಇಂಥ ದೇವಸ್ಥಾನದಲ್ಲಿ ಸರದಿ ಪ್ರಕಾರ ಪೂಜೆ ಸಲ್ಲಿಸುತ್ತಿರುವ ಅರ್ಚಕರಿಬ್ಬರ ವೈಯಕ್ತಿಕ ಪ್ರತಿಷ್ಠೆ ಹಾಗೂ ಉದ್ದಟತನದಿಂದ ಭಕ್ತರು ಬೇಸತ್ತಿದ್ದಾರೆ.

ಬುಧವಾರ ನಡೆದ ಜಾತ್ರೆಯಲ್ಲಿ ಸರದಿಯಂತೆ ಜಿ.ಎನ್.ನರಸಿಂಹಚಾರ್ ಪೂಜೆ ಪುನಸ್ಕಾರ ಮಾಡಿ, ರಥೋತ್ಸವ ಹಾಗೂ ಜಾತ್ರೆ ಸುಗಮವಾಗಿ ನಡೆಯುವಂತೆ ಮಾಡಬೇಕು. ಆದರೆ ಸಕಾಲಕ್ಕೆ ಯಾವುದನ್ನು ಸರಿಯಾಗಿ ಮಾಡದೆ ಸಮಿತಿಯವರ ಜೊತೆಗೂ ಭಿನ್ನಾಭಿಪ್ರಾಯ ಇಟ್ಟುಕೊಂಡು ನರಸಿಂಹಸ್ವಾಮಿ ಜಾತ್ರೆ ಯಾರು ಬೇಕಾದರೂ ಮಾಡಿಕೊಳ್ಳಿ, ನಾನು ಮಾಡಲ್ಲ ಅಂತ ಹೇಳಿ ಕೆಲಕಾಲ ಆತಂಕ ಉಂಟು ಮಾಡಿದ್ದರು ಎಂದು ದೇವಸ್ಥಾನ ಸಮಿತಿ ಸದಸ್ಯ ರಘುನಾಥ್ ಹೇಳಿದ್ದಾರೆ.

ಹಾಲಿ ಅರ್ಚಕ ಜಿ.ಎನ್.ನರಸಿಂಹಚಾರ್ ಪೂಜೆ ಮಾಡೋದು ಬೇಡ, ಇನ್ನೊಬ್ಬ ಅರ್ಚಕರ ಮಗನನ್ನು ಕರೆಸಿ ಪೂಜೆ ಮಾಡಿಸುತ್ತೀವಿ ಎಂದು ಗ್ರಾಮಸ್ಥರು ದೇವಸ್ಥಾನದ ಬಳಿ ವಾಗ್ವಾದ ನಡೆಸಿದ್ದರು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ತಹಶೀಲ್ದಾರ್ ನರಸಿಂಹಮುರ್ತಿ ತಕ್ಷಣ ದೇವಸ್ಥಾನ ಹಾಗೂ ಜಾತ್ರೆಗೆ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು, ಹಾಲಿ ಅರ್ಚಕರಿಗೆ ಬುದ್ಧಿವಾದ ಹೇಳಿದ್ದರು. ಬಳಿಕ ನರಸಿಂಹಚಾರ್ ತಡವಾಗಿ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ಮುಗಿಸಿ ರಥೋತ್ಸವ ನಡೆಸಿಕೊಟ್ಟರು. ಆದರೆ ನರಸಿಂಹಚಾರ್ ಗೆ ತೊಂದರೆ ಮಾಡಲೆಂದೆ ಜನಾರ್ಧನಾಚಾರ್ ಮಗ ಸಂತೋಷ ಎನ್ನುವಾತ ಗ್ರಾಮದ ಕೆಲವರನ್ನು ಎತ್ತಿಕಟ್ಟಿ ಇಲ್ಲ ಸಲ್ಲದ ತೊಂದರೆ ಮಾಡುತ್ತಿದ್ದಾನೆ. ತಮ್ಮ ಪೂಜಾ ಸರದಿ ಇಲ್ಲದಿದ್ದರೂ ನರಸಿಂಹಚಾರ್‍ಗೆ ತೊಂದರೆ ಮಾಡುತ್ತಿದ್ದಾನೆ. ಅದಕ್ಕೆ ಹಾಲಿ ಅರ್ಚಕರು ಬೇಸರ ಮಾಡಿಕೊಂಡಿದ್ದಾರೆ ಎಂದು ನರಸಿಂಹಚಾರ್ ಬೆಂಬಲಿಗ ರಾಜಗೋಪಾಲಾಚಾರ್ ಹೇಳಿದ್ದಾರೆ.

ಇಬ್ಬರು ಅರ್ಚಕರ ಕುಟುಂಬಗಳ ಮಧ್ಯೆ ಇರುವ ದ್ವೇಷ, ಅಸೂಹೆ, ವೈಯಕ್ತಿಕ ಕಾರಣಗಳಿಂದ ಜಾಲಾರಿ ನರಸಿಂಹಸ್ವಾಮಿ ಜಾತ್ರೆಗೂ ವಿಘ್ನ ಎದುರಾಗಿ ಕೊನೆಗೆ ತಹಶೀಲ್ದಾರ್ ಪ್ರವೇಶದಿಂದ ಸುಗಮವಾಗಿ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *