ದುಬೈ: ಕ್ರಿಕೆಟ್ ನಲ್ಲಿ ಹಲವು ಬದಲಾವಣೆಗಳು ನಡೆಯುತ್ತಿದ್ದು, ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ನಲ್ಲೂ ಆಟಗಾರರು ನಂಬರ್ ಇರುವ ಟಿ ಶರ್ಟ್ ಧರಿಸಲಿದ್ದಾರೆ.
ಹೌದು. ಟೆಸ್ಟ್ ನಲ್ಲೂ ಸಂಖ್ಯೆ ಇರುವ ಟಿ ಶರ್ಟ್ ಧರಿಸಲು ಅನುಮತಿ ನೀಡುವಂತೆ ಐಸಿಸಿಯ ಮುಂದೆ ಪ್ರಸ್ತಾಪ ಬಂದಿದೆ. ಈ ಪ್ರಸ್ತಾಪಕ್ಕೆ ಐಸಿಸಿ ಒಪ್ಪಿಗೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಲಿರುವ ಆ್ಯಶಸ್ ಟೂರ್ನಿ ವೇಳೆ ಆಟಗಾರರು ಮೊದಲ ಬಾರಿಗೆ ನಂಬರ್ ಇರುವ ಟಿ ಶರ್ಟ್ ಧರಿಸಲಿದ್ದಾರೆ. ಬ್ಯಾಡ್ಜ್ ನ ಕೆಳಗಡೆ ನಂಬರ್ ಸ್ಟಿಚ್ ಆಗಲಿದೆ.
1877 ರಿಂದ ಟೆಸ್ಟ್ ಕ್ರಿಕೆಟ್ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಆಟಗಾರರು ಬಿಳಿ ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣ ಟಿ ಶರ್ಟ್ ಧರಿಸಿ ಅಂಗಳಕ್ಕೆ ಇಳಿಯುತ್ತಿದ್ದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರರು ಈಗಾಗಲೇ ನಂಬರ್ ಇರುವ ಟಿ ಶರ್ಟ್ ಧರಿಸುತ್ತಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್ ಪ್ರತಿಕ್ರಿಯಿಸಿ,”ಆಟದ ಸಮಯದಲ್ಲಿ ಅಭಿಮಾನಿಗಳಿಗೆ ಆಟಗಾರರನ್ನು ಗುರುತಿಸಲು ಕಷ್ಟವಾಗುತ್ತದೆ. ನಂಬರ್ ಇದ್ದರೆ ಸುಲಭವಾಗಿ ಆಟಗಾರರು ಯಾರು ಎನ್ನುವುದನ್ನು ತಿಳಿಯಬಹುದು” ಎಂದು ಹೇಳಿದ್ದಾರೆ.