ಬಳ್ಳಾರಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ- ಕಾಂಗ್ರೆಸ್ ಜೊತೆ ಸೇರಿ ಸ್ವಪಕ್ಷೀಯರೇ ಸಮರ..!

Public TV
1 Min Read

ಬಳ್ಳಾರಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಬಳ್ಳಾರಿಯ ಬಿಜೆಪಿ ನಾಯಕರಿಗೆ ಬಿಗ್ ಶಾಕ್ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸಲು ಅಭ್ಯರ್ಥಿ ಹುಡುಕಾಟದಲ್ಲಿರುವ ಕಮಲ ಪಾಳಯದ ನಾಯಕರಿಗೆ ಸ್ವಪಕ್ಷೀಯ ಸದಸ್ಯರೇ ಶಾಕ್ ಕೊಟ್ಟಿದ್ದಾರೆ.

ಹೌದು, ಬಳ್ಳಾರಿ ಜಿಲ್ಲಾ ಪಂಚಾಯತ್‍ನ ಬಿಜೆಪಿ ಸದಸ್ಯರಲ್ಲಿನ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ವಶದಲ್ಲಿರುವ ಜಿ.ಪಂ ಅಧ್ಯಕ್ಷ ಉಪಾಧ್ಯಕ್ಷರನ್ನ ಕೆಳಗಿಸಲು ಬಿಜೆಪಿ ಸದಸ್ಯರು ಇದೀಗ ಕಾಂಗ್ರೆಸ್ ಸದಸ್ಯರ ಜೊತೆ ಕೈ ಜೋಡಿಸಿದ್ದಾರೆ. ಕಳೆದ ಮೂರು ವರ್ಷದಿಂದ ಅಧ್ಯಕ್ಷರಾಗಿರುವ ಬಿಜೆಪಿಯ ಭಾರತಿ ತಿಮ್ಮಾರೆಡ್ಡಿ ಹಾಗೂ ಉಪಾಧ್ಯಕ್ಷೆ ದೀನಾ ಮಂಜುನಾಥರನ್ನ ಅಧಿಕಾರದಿಂದ ಕೆಳಗಿಳಿಸಲು ಸ್ವಪಕ್ಷೀಯ ಸದಸ್ಯರೇ ಇದೀಗ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ. ಬಿಜೆಪಿಯ 13 ಸದಸ್ಯರೊಂದಿಗೆ ಕಾಂಗ್ರೆಸ್‍ನ 14 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಾಥ್ ನೀಡಿರುವುದು ಲೋಕಸಭಾ ಚುನಾವಣೆ ವೇಳೆಯಲ್ಲಿ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ ಎಂದು ಬಿಜೆಪಿ ಜಿ.ಪಂ ಸದಸ್ಯ ಎಂ.ಜೆ.ಎಂ.ಹರ್ಷವರ್ಧನ್ ತಿಳಿಸಿದ್ದಾರೆ.

`ಕೈ’ ಹೈಕಮಾಂಡ್ ಗ್ರೀನ್‍ಸಿಗ್ನಲ್:
ಬಿಜೆಪಿಯ ಅಧ್ಯಕ್ಷೆ, ಉಪಾಧ್ಯಕ್ಷೆಯ ವಿರುದ್ಧ ಸ್ವಪಕ್ಷೀಯ ಸದಸ್ಯರೇ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸಹ ಸಾಥ್ ನೀಡಿರುವುದು ವಿಶೇಷವಾಗಿದೆ. ಇದಕ್ಕೆ ಸ್ವತ: ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಬಿಜೆಪಿ ಸದಸ್ಯರ ಮೂಲಕವೇ ಬಿಜೆಪಿ ಅಧ್ಯಕ್ಷ-ಉಪಾಧ್ಯಕ್ಷರನ್ನ ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿರುವುದು ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಎಂದು ಕಾಂಗ್ರೆಸ್ ಜಿಪಂ ಸದಸ್ಯ ಪ್ರವೀಣ್ ಸಿಂಗ್ ಹೇಳಿದ್ದಾರೆ.

ನಕಲಿ ಆದಾಯ ಪ್ರಮಾಣ ಪತ್ರ ನೀಡಿ ಅಧಿಕಾರಕ್ಕೇರಿದ್ದ ಅಧ್ಯಕ್ಷರು ಕಳೆದ ಮೂರು ವರ್ಷಗಳಿಂದ ಕುರ್ಚಿ ಉಳಿಸಿಕೊಳ್ಳಲು ಕೋರ್ಟ್ ಗೆ ಅಲೆದಾಡುತ್ತಿದ್ದಾರೆ. ಇದೀಗ ಸ್ವಪಕ್ಷೀಯರೇ ಅವಿಶ್ವಾಸ ಮಂಡಿಸಿ ನೋಟಿಸ್ ನೀಡಿದ್ದು, ಸಿಇಓರಿಗೂ ಮನವಿ ಸಲ್ಲಿಸಿದ್ದಾರೆ. ಲೋಕ ಸಮರದಲ್ಲಿ ಕುಸ್ತಿಯಾಡ್ತಿರೋ ಬಿಜೆಪಿ-ಕಾಂಗ್ರೆಸ್ ಮಂದಿ ಬಳ್ಳಾರಿಯಲ್ಲಿ ದೋಸ್ತಿ ಮಾಡ್ಕೊಂಡಿರೋದು ಅಚ್ಚರಿ ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *