ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್ – ಐತಿಹಾಸಿಕ ಗೆಲುವು ಪಡೆದ ಕೊಹ್ಲಿ ಪಡೆ

Public TV
4 Min Read

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗಳ ರೋಚಕ ಗೆಲುವು ಪಡೆದಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ 250 ರನ್ ಅಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಓವರ್ ಗಳಲ್ಲಿ 49.3 ಓವರ್ ಗಳಲ್ಲಿ 242 ರನ್ ಗಳಿಗೆ ಅಲೌಟ್ ಆಯ್ತು.

ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 500 ಗೆಲುವುಗಳನ್ನು ಪೂರ್ಣಗೊಳಿಸಿತು. ಈ ಪಟ್ಟಿಯಲ್ಲಿ ಆಸೀಸ್ ಬಳಿಕ 2ನೇ ಸ್ಥಾನ ಭಾರತ 2ನೇ ಸ್ಥಾನವನ್ನು ಪಡೆದಿದೆ. ಆಸೀಸ್ ಇದುವರೆಗೂ 923 ಪಂದ್ಯಗಳಿಂದ 558 ಗೆಲುವು ಪಡೆದಿದ್ದರೆ, ಟೀಂ ಇಂಡಿಯಾ 963 ಪಂದ್ಯಗಳಿಂದ 500 ಗೆಲುವು ಗಳಿಸಿದೆ.

ಟೀಂ ಇಂಡಿಯಾ ನೀಡಿದ 251 ರನ್ ಗಳ ಗುರಿ ಬೆನ್ನತ್ತಿದ್ದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜಾ ಮೊದಲ ವಿಕೆಟ್‍ಗೆ 83 ರನ್ ಗಳ ಜೊತೆಯಾಟ ನೀಡಿದರು. ಟೀಂ ಇಂಡಿಯಾ ಬೌಲರ್ ಗಳನ್ನು ಎಚ್ಚರಿಕೆಯಿಂದ ಎದುರಿಸುತ್ತಿದ್ದ ಈ ಇಬ್ಬರ ಜೋಡಿಯನ್ನು ಕುಲ್ದೀಪ್ ಯಾದವ್ ಬೇರ್ಪಡಿಸಿದರು. ರಕ್ಷಣಾತ್ಮಕವಾಗಿ ಬ್ಯಾಟ್ಸ್ ಬೀಸುತ್ತಿದ್ದ ಫಿಂಚ್ 37 ರನ್ ಗಳಿಸಿದ್ದ ವೇಳೆ ಎಲ್‍ಬಿ ಬಲೆಗೆ ಸಿಲುಕಿ ಔಟಾದರು. ಬೆನ್ನ್ಲೇ ಮತ್ತೊರ್ವ ಆರಂಭಿಕ ಉಸ್ಮಾನ್ ಖವಾಜಾ 38 ರನ್ ಗಳಿಸಿದ್ದ ವೇಳೆ ಕೇದರ್ ಜಾಧವ್‍ಗೆ ವಿಕೆಟ್ ಒಪ್ಪಿಸಿದರು.

ಆರಂಬಿಕ ವಿಕೆಟ್ ಪಡೆದ ಮೇಲೂ ಭಾರತ ಬೌಲರ್ ಗಳು ರನ್ ವೇಗಕ್ಕೆ ಕಡಿವಾಣ ಹಾಕಲು ಶ್ರಮವಹಿಸಿದರು. 3ನೇ ವಿಕೆಟ್ ಜೊತೆಯಾಟ ಶಾನ್ ಮಾರ್ಶ್ ಹಾಗೂ ಪೀಟರ್ ಹ್ಯಾಂಡ್ಸ್ ಕಾಂಬ್ ಮಹತ್ವದ 41 ರನ್‍ಗಳ ಜೊತೆಯಾಟ ನೀಡಿದರು. 16 ರನ್ ಗಳಿಸಿದ್ದ ಮಾರ್ಶ್ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಈ ಝೊಡಿಯನ್ನು ಬೇರ್ಪಡಿಸಿದರು. ಈ ಹಂತದಲ್ಲಿ ಆಸೀಸ್ 25 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 126 ಗಳಿಸಿ ಸುಸ್ಥಿಯಲ್ಲಿ ಇತ್ತು.

ಆ ಬಳಿಕ ಬಂದ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮ್ಯಾಕ್ಸ್ ವೆಲ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಪಂದ್ಯಕ್ಕೆ ಬೀಗ್ ಟರ್ನ್ ನೀಡಿದರು. ಆ ಬಳಿಕ ತಾಳ್ಮೆಯ ಆಟವಾಡುತ್ತಿದ್ದ ಹ್ಯಾಂಡ್ಸ್ ಕಾಂಬ್ ರನ್ನು ಜಡೇಜಾ ರನೌಟ್ ಮಾಡುವ ಮೂಲಕ ಗೆಲುವಿನ ಆಸೆಯನ್ನ ಚಿಗುರುವಂತೆ ಮಾಡಿದರು. ಆದರೆ ಸ್ಟೋಯಿನ್ಸ್ ಅಂತಿಮ ಸಮಯದ ವರೆಗೂ ಬೌಲರ್ ಕಾಡಿದರು.

ಬುಮ್ರಾ ಮಿಂಚು: 46ನೇ ಓವರ್ ಎಸೆದ ಬುಮ್ರಾ ಬೌಲಿಂಗ್ ನಲ್ಲಿ ನೈಲ್ 4 ರನ್, ಕಮ್ಮಿನ್ಸ 0 ಶೂನ್ಯಕ್ಕೆ ಹಿಂದಿರುಗಿದರು ಕೂಡ ಬ್ಯಾಟಿಂಗ್ ಕಾಯ್ದುಕೊಂಡ ಸ್ಟೋಯಿನ್ಸ್ ಟೀಂ ಇಂಡಿಯಾಗೆ ತಲೆನೋವಾಗಿ ಕಾಡಿದರು. ಅಂತಿಮ 18 ಎಸೆಗಳಲ್ಲಿ 2 ವಿಕೆಟ್ ನಿಂದಿಗೆ ಆಸೀಸ್ 21 ರನ್ ಗಳಿಸಬೇಕಿತ್ತು. 48ನೇ ಓವರ್ ಬೌಲ್ ಮಾಡಿದ ಬುಮ್ರಾ ಬಿಗಿ ಬೌಲಿಂಗ್ ದಾಳಿ ನಡೆಸಿದರು. ಪರಿಣಾಮ ಓವರಿನಲ್ಲಿ ಒಂದು ರನ್ ಮಾತ್ರ ಲಭಿಸಿತು. ನಂತರದ ಓವರಿನಲ್ಲಿ ಸ್ಟೋಯಿನ್ಸ್ ತಮ್ಮ ಅರ್ಧ ಶತಕ ಪೂರೈಸಿದರು. ಈ ಓವರಿನಲ್ಲಿ ಶಮಿ 9 ರನ್ ಬಿಟ್ಟುಕೊಟ್ಟ ಪರಿಣಾಮ ಅಂತಿಮ ಓವರಿನಲ್ಲಿ 11 ರನ್ ಗಳಿಸುವ ಒತ್ತಡಕ್ಕೆ ಆಸೀಸ್ ಸಿಲುಕಿತು.

ಅಂತಿಮ ಓವರ್ ಎಸೆದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಸ್ಟೋಯಿನ್ಸ್ ರನ್ನು ಎಲ್‍ಬಿ ಬಲೆಗೆ ಕೆಡವಿದರು. 65 ಎಸೆತಗಳನ್ನು ಎದುರಿಸಿದ್ದ ಸ್ಟೋಯಿನ್ಸ್ 52 ರನ್ ಗಳಿಸಿ ಔಟಾದರು. ಬಳಿಕ ಜಂಪಾ ವಿಕೆಟ್ ಪಡೆಯುತ್ತಿದಂತೆ ಆಸೀಸ್ 49.3 ಓವರ್ ಗಳಲ್ಲಿ 242 ರನ್ ಗಳಿಗೆ ಅಲೌಟ್ ಆಯ್ತು.

ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ಶಂಕರ್ ಹಾಗೂ ಬುಮ್ರಾ ತಲಾ 2, ಜಾಧವ್, ಜಡೇಜಾ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕರ ವೈಫಲ್ಯದ ನಡುವೆಯೂ ನಾಯಕ ಕೊಹ್ಲಿ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ ಸವಾಲಿನ ಮೊತ್ತ ಗಳಿಸಿತು. ಕೊಹ್ಲಿ 120 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿ ಮಿಂಚಿದರು. ಇತ್ತ ಯುವ ಆಟಗಾರ ವಿಜಯ್ ಶಂಕರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ಪಡೆದು ಬಂದು ಬಿರುಸಿನ ಆಟ ಪ್ರದರ್ಶಿಸಿದರು. ಅಲ್ಲದೇ ಕೊಹ್ಲಿಯೊಂದಿಗೆ 81 ರನ್‍ಗಳ ಜತೆಯಾಟದಲ್ಲಿ ನೀಡಿದ್ದರು. ಆದರೆ 46 ರನ್ ಗಳಿಸಿದ್ದ ವೇಳೆ ಅನಿರೀಕ್ಷಿತವಾಗಿ ರನೌಟ್ ಆದ್ರು.

ವಿಶೇಷವೆಂದರೆ ಪಂದ್ಯದಲ್ಲಿ ಒನ್‍ಡೌನ್ ಆಟಗಾರರಾಗಿ ಬಂದ ಕೊಹ್ಲಿ ಟೀಂ ಇಂಡಿಯಾ ಗಳಿಸಿದ್ದ 248 ರನ್ ಗಳ ಅವಧಿಯಲ್ಲಿ ಫೀಲ್ಡ್ ನಲ್ಲೇ ಇದ್ದರು. ಕೊಹ್ಲಿ ಔಟಾದ ವೇಳೆಯಲ್ಲಿ ತಂಡ 248 ರನ್ ಗಳಿಸಿತ್ತು. ಕೊಹ್ಲಿ ಔಟಾದ ಬಳಿಕ 2 ರನ್ ಮೊತ್ತಕ್ಕೆ ಸೇರ್ಪಡೆಯಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *