ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

Public TV
2 Min Read

– ಬಾಂಬ್ ದಾಳಿ ನಡೆದ ಸ್ಥಳಕ್ಕೆ ಕೂಡಲೇ ಬಂತು ಅಂಬುಲೆನ್ಸ್
– ಸಿಬ್ಬಂದಿಯಿಂದ ಮೊಬೈಲ್ ಕಸಿದ ಪಾಕ್ ಸೇನೆ

ಇಸ್ಲಾಮಾಬಾದ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಾಲಕೋಟ್ ಕ್ಯಾಂಪ್ ಮೇಲೆ ಭಾರತೀಯ ವಾಯು ಪಡೆ ನಡೆಸಿದ್ದ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಉಗ್ರರನ್ನು ಹತ್ಯೆ ಮಾಡಿಲ್ಲ. ಖಾಲಿ ಜಾಗದ ಮೇಲೆ ಬಾಂಬ್ ಹಾಕಲಾಗಿದೆ ಎಂದು ಬಿಂಬಿಸಿದ್ದ ಪಾಕ್ ಸುಳ್ಳಿನ ನಾಟಕ ಈಗ ಬಯಲಾಗಿದೆ. ಪಾಕ್ ನಿವಾಸಿಗಳೇ ದಾಳಿಯಲ್ಲಿ 35 ಶವಗಳನ್ನು ಸಾಗಿಸಿದ ದೃಶ್ಯ ನೋಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಭಾರತೀಯ ವಾಯು ಪಡೆಯ ಮಿರಜ್2000 ಯುದ್ಧ ವಿಮಾನದ ಮೂಲಕ ಬಾಲಕೋಟ್ ಉಗ್ರರ ಶಿಬಿರದ ಮೇಲೆ ಫೆಬ್ರವರಿ 26ರಂದು ದಾಳಿ ಮಾಡಲಾಗಿತ್ತು. ಹೀಗಾಗಿ ದಾಳಿ ನಡೆದ ಸ್ಥಳಕ್ಕೆ ಸಾರ್ವಜನಿಕರು ಹೋಗದಂತೆ ಪಾಕ್ ಸೈನ್ಯ ಸುತ್ತುವರಿದಿತ್ತು. ಅಷ್ಟೇ ಅಲ್ಲದೆ ಘಟನಾ ಸ್ಥಳದ ಸಮೀಪದ ಠಾಣೆಯ ಪೊಲೀಸರಿಗೂ ಅವಕಾಶ ಕೊಡಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗೆ ಎಂದು ವಿದೇಶಿ ಪ್ರತಕರ್ತೆಯೊಬ್ಬರು ವರದಿ ಮಾಡಿದ್ದಾರೆ.

ವಿದೇಶಿ ಪತ್ರಕರ್ತೆ ಫ್ರಾನ್ಸೆಸ್ಸಾ ಮಾರಿನೋ ಎಂಬವರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಪಾಕಿಸ್ತಾನದ ಸುಳ್ಳು, ಮೊಂಡುವಾದವನ್ನು ವರದಿಯ ಮೂಲಕ ಬಯಲು ಮಾಡಿದ್ದಾರೆ. ತನಗೆ ಸಿಕ್ಕ ಮಾಹಿತಿಗಳ ಪ್ರಕಾರ 40-50 ಉಗ್ರರು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮಾರಿನೋ ಹೇಳಿದ್ದಾರೆ.

ಏರ್ ಸ್ಟ್ರೈಕ್‍ನ ಬಾಂಬ್ ದಾಳಿಯಿಂದ ಮೃತಪಟ್ಟಿದ್ದ ಉಗ್ರರ ಶವಗಳನ್ನು ಸಾಗಿಸಲು ಅಂಬುಲೆನ್ಸ್ ಗಳನ್ನು ಕರೆಸಲಾಗಿತ್ತು. ಫೋಟೋ, ವಿಡಿಯೋಗಳು ಸೆರೆ ಹಿಡಿಯಬಾರದು ಎನ್ನುವ ಕಾರಣಕ್ಕಾಗಿ ಅಂಬುಲೆನ್ಸ್ ಸಿಬ್ಬಂದಿ ಮೊಬೈಲ್ ಫೋನ್‍ಗಳನ್ನು ಪಾಕ್ ಸೈನಿಕರು ಪಡೆದಿದ್ದರು ಎಂದು ವರದಿಯಲ್ಲಿ ಹೇಳಿದ್ದಾರೆ.

ಬಾಲಕೋಟ್ ಕ್ಯಾಂಪ್ ಮೇಲೆ ಭಾರತೀಯ ವಾಯು ಪಡೆ ಬಾಂಬ್ ದಾಳಿ ನಡೆಸಿದ ಸ್ವಲ್ಪ ಸಮಯಕ್ಕೆ ಪಾಕ್ ಸೇನೆ ಸ್ಥಳಕ್ಕೆ ಬಂದಿತ್ತು. ತಕ್ಷಣವೇ ಉಗ್ರರ 35 ಶವಗಳನ್ನು ಆಂಬುಲೆನ್ಸ್ ನಲ್ಲಿ ಸಾಗಣೆ ಮಾಡುತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಮೃತರ ಪೈಕಿ 12 ಜನರು ಒಂದೇ ಕೊಠಡಿಯಲ್ಲಿ ಮಲಗಿದ್ದರು. 35 ಶವಗಳಲ್ಲಿ ಪಾಕ್ ಸೇನೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳ ಮೃತ ದೇಹಗಳು ಇದ್ದವು ಎಂದು ಹೆಸರು ಬಹಿರಂಗಪಡಿಸದ ಪಾಕಿಸ್ತಾನದ ಸರ್ಕಾರಿ ಅಧಿಕಾರಿಯೊಬ್ಬರು ತಾವು ನೋಡಿದ ದೃಶ್ಯವನ್ನು ತಿಳಿಸಿದ್ದಾಗಿ ಪತ್ರಕರ್ತೆ ಹೇಳಿದ್ದಾರೆ.

 

ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐನ ನಿವೃತ್ತ ಅಧಿಕಾರಿಯೊಬ್ಬ ಬಲಿಯಾಗಿದ್ದಾನೆ. ಮೃತ ಅಧಿಕಾರಿಯನ್ನು ಸ್ಥಳೀಯವಾಗಿ ಕರ್ನಲ್ ಸಲೀಂ ಎಂದು ಕರೆಯಲಾಗುತ್ತಿತ್ತು. ಸುಧಾರಿತ ಸ್ಫೋಟಕ ತಯಾರಿಸುವುದರಲ್ಲಿ ಪರಿಣತರನಾಗಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯಲ್ಲಿದ್ದ ತರಬೇತುದಾರ ಉಸ್ಮಾನ್ ಘನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕರ್ನಲ್ ಜರಾರ್ ಜಾಕ್ರಿ ಎಂಬವರು ಗಾಯಗೊಂಡಿದ್ದಾನೆ ಎಂದು ಫ್ರಾನ್ಸೆಸ್ಸಾ ಮಾರಿನೋ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *