ಪ್ರಿಯತಮನ ಜೊತೆ ಓಡಿ ಹೋಗಿ ಆತನ ತಂದೆಯನ್ನ ಮದ್ವೆಯಾದ ಯುವತಿ

Public TV
2 Min Read

– ಅವರನ್ನ ಬಿಟ್ಟು, ಇವರನ್ನ ಬಿಟ್ಟು 3ನೇ ವ್ಯಕ್ತಿ ಅರೆಸ್ಟ್!
– ಬಂಧನಕ್ಕೊಳಗಾದ ಮೂರನೇ ವ್ಯಕ್ತಿ ಯಾರು?

ಪಾಟ್ನಾ: ಇಂದಿನ ಯುವ ಜನತೆ ಪ್ರೇಮ ಬಂಧನಕ್ಕೊಳಗಾಗಿ ಮನೆಯಲ್ಲಿ ಮದುವೆ ಒಪ್ಪದೇ ಇದ್ದಲ್ಲಿ ಓಡಿ ಹೋಗಿ ವಿವಾಹವಾಗೋದನ್ನು ಕೇಳಿದ್ದೇವೆ. ಆದ್ರೆ ಮದುವೆ ಮಾಡಿಕೊಳ್ಳಲು ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದ ಯುವತಿ ಆತನ ವಿಧುರ ತಂದೆಯ ಕೈಯಿಂದಲೇ ತಾಳಿ ಕಟ್ಟಿಸಿಕೊಂಡಿದ್ದಾಳೆ.

ಬಿಹಾರ ರಾಜ್ಯದ ಸಮಸ್ತಿಪುರ ಜಿಲ್ಲೆಯ ಹಲಯಿ ಓಪಿ ಕ್ಷೇತ್ರದಲ್ಲಿ ವಿಚಿತ್ರ ಘಟನೆ ನಡೆದಿದೆ. ಯುವತಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಬೇರೊಬ್ಬ ಯುವಕನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದರು. ಕೊನೆಗೆ ಯುವತಿಯೇ ಠಾಣೆಗೆ ಬಂದು ತಾನು ಹೋಗಿದ್ದು ಬೇರೊಬ್ಬನ ಜೊತೆ ಎಂದಾಗ ಬಂಧಿತನನ್ನು ಬಿಡುಗಡೆಗೊಳಿಸಲಾಗಿದೆ.

ಏನಿದು ಪ್ರೇಮ ಕಹಾನಿ?
ಆರು ತಿಂಗಳ ಹಿಂದೆ ಕಾಲೇಜಿಗೆ ಅಂತಾ ಹೋದ ಯುವತಿ ಸಂಜೆಯಾದ್ರೂ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಅದೇ ಗ್ರಾಮದ ಸತ್ಯನಾರಾಯಣ್ ಸಿಂಗ್ ಎಂಬವರ ಪುತ್ರ ಹರಿ ಓಂ ಎಂಬಾತ ತಮ್ಮ ಪುತ್ರಿಯನ್ನು ಅಪಹರಿಸಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಪೊಲೀಸರು ಸಹ ಹರಿಓಂ ಮತ್ತು ಆತನ ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೊನೆಗೆ ಹರಿ ಓಂ ಕೆಲದಿನ ಜೈಲಿನಲ್ಲಿರುವ ಪರಿಸ್ಥಿತಿಯೂ ಬಂತು.

ಠಾಣೆಗೆ ಬಂದ ಯುವತಿ ಹೇಳಿದ್ದೇನು?
ಹರಿ ಓಂನನ್ನು ಬಂಧಿಸಿ ಜೈಲಿನಲ್ಲಿರಿಸಿದ ಸುದ್ದಿ ತಿಳಿದು ಬಂದು ಠಾಣೆಗೆ ಬಂದ ಯುವತಿ ತನ್ನ ಪ್ರೇಮ ಕಥನವನ್ನು ಪೊಲೀಸರ ಮುಂದೆ ಹೇಳಿದ್ದಾಳೆ. ಕಾಲೇಜಿಗೆ ಹೋಗುತ್ತಿದ್ದ ವೇಳೆ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಮದುವೆಗೆ ಪೋಷಕರು ವಿರೋಧಿಸುತ್ತಾರೆಂದು ಒಂದು ದಿನ ಇಬ್ಬರು ವಿದ್ಯಾಪತಿಧಾಮಕ್ಕೆ ಓಡಿ ಹೋದೆವು. ಅಲ್ಲಿಗೆ ಹೋದ್ಮೇಲೆ ಪ್ರಿಯಕರನಿಗೆ ಇನ್ನು 17 ವರ್ಷ ಎಂಬ ವಿಷಯ ಗೊತ್ತಾಯ್ತು. ಕೊನೆಗೆ ನಾನು ಪ್ರಿಯಕರನ ತಂದೆಯನ್ನು ಮದುವೆಯಾದೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ತನ್ನ ಈ ಮದುವೆಗೆ ಪ್ರಿಯಕರನ ಸಮ್ಮತಿ ಇದೆ ಎಂದು ಸಹ ತಿಳಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆಯೂ ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚುವರಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *