ಜಾಧವ್ ಕೇಸ್ – ಐಸಿಜೆಯಲ್ಲಿ ಪಾಕ್ ಮಿಲಿಟರಿ ಕೋರ್ಟ್ ಮಾನ ಹರಾಜು

Public TV
2 Min Read

ನವದೆಹಲಿ: ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಜಾಧವ್ ವಿಚಾರಣೆ ವಿಧಾನ ಕಾನೂನುಬಾಹಿರವೆಂದು ಘೋಷಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ(ಐಸಿಜೆ) ಭಾರತ ಮನವಿ ಸಲ್ಲಿಸಿದೆ.

ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಂದು ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಯಿತು. ಭಾರತದ ಪರ ಹರೀಶ್ ಸಾಳ್ವೆ ಅವರು ವಾದ ಮಂಡಿಸಿದರು.

ಭಾರತದ ವಾದವೇನು?:
ಪಾಕಿಸ್ತಾನ 1963ರ ವಿಯೆನ್ನಾ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದೆ. ಕುಲಭೂಷಣ್ ಜಾಧವ್ ರಾ (ರಿಸರ್ಚ್ & ಅನಾಲಿಸಿಸ್ ವಿಂಗ್)ಗೆ ಸೇರಿದವರಲ್ಲ. ಅವರನ್ನು ಬಂಧಿಸಿದ 1 ತಿಂಗಳ ನಂತರ ಎಫ್‍ಐಆರ್ ದಾಖಲಿಸಲಾಯಿತು. 3 ವರ್ಷಗಳ ಕಾಲ ಚಿತ್ರಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದೆ. ಪಾಕಿಸ್ತಾನ ಮಿಲಿಟರಿ ಕೋರ್ಟ್ ಸರಿಯಾಗಿ ವಿಚಾರಣೆಯನ್ನೂ ನಡೆಸದೆ, ಆರೋಪ ಸಾಬೀತಾಗದಿದ್ದರೂ ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಎಲ್ಲಾ ರೀತಿಯಲ್ಲೂ ಮಾನವಹಕ್ಕುಗಳನ್ನು ಉಲ್ಲಂಘಿಸಿದೆ. 13 ಬಾರಿ ಮನವಿ ಮಾಡಿದರೂ ರಾಜತಾಂತ್ರಿಕರ ಭೇಟಿಗೆ ಅವಕಾಶ ನೀಡದೇ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿದೆ. ಅಲ್ಲದೆ ಈವರೆಗೆ ಪಾಕಿಸ್ತಾನ ಜಾಧವ್ ವಿರುದ್ಧದ ದಾಖಲೆಗಳನ್ನೂ ನೀಡಿಲ್ಲ ಎಂದು ಭಾರತದ ಪರ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ.

ಸೋಮವಾರ ಭಾರತ ವಾದ ಮಂಡಿಸಿದರೆ ಮಂಗಳವಾರ ಪಾಕಿಸ್ತಾನ ವಾದ ಮಂಡಿಸಲಿದೆ. ಬುಧವಾರ ಪಾಕ್ ಆರೋಪಗಳಿಗೆ ಭಾರತ ಉತ್ತರ ನೀಡಿದರೆ, ಗುರುವಾರ ಭಾರತದ ಆರೋಪಗಳಿಗೆ ಪಾಕ್ ಉತ್ತರ ನೀಡಲಿದೆ. ಎರಡು ಕಡೆಯ ವಾದವನ್ನು ಆಲಿಸಿದ ಕೋರ್ಟ್ ಈ ವರ್ಷದ ಬೇಸಗೆಯಲ್ಲಿ ಅಂತಿಮ ತೀರ್ಪು ಪ್ರಕಟಿಸಲಿದೆ.

ಏನಿದು ಪ್ರಕರಣ?
ಭಾರತದ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ದಳವು ಬಲೂಚಿಸ್ತಾನದಲ್ಲಿ 2016 ಮಾರ್ಚ್ 3ರಂದು ಬಂಧಿಸಿತ್ತು. ಭಾರತದ ಸಂಶೋಧನಾ ಮತ್ತು ವಿಶ್ಲೇಷಣಾ ದಳದ ಭಾತ್ಮಿದಾರನಾಗಿ ಕುಲಭೂಷಣ್ ಜಾಧವ್, ಹುಸೇನ್ ಮುಬಾರಕ್ ಪಟೇಲ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದರೆಂಬ ಆರೋಪದ ಮೇಲೆ ಅವರನ್ನು ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಜಾಧವ್‍ಗೆ 2017 ಏಪ್ರಿಲ್ 10ರಂದು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಯಾವುದೇ ಸಾಕ್ಷಿ, ಆಧಾರಗಳಲಿಲ್ಲದೆ ಗಲ್ಲು ಶಿಕ್ಷೆ ವಿಧಿಸಿದ ಕ್ರಮವನ್ನು ಪ್ರಶ್ನಿಸಿ ಭಾರತ ಐಸಿಜೆ ಮೆಟ್ಟಿಲೇರಿತ್ತು. ಇದರಿಂದಾಗಿ ಐಸಿಜೆಯ 10 ಸದಸ್ಯರ ನ್ಯಾಯಪೀಠ ವಿಚಾರಣೆ ಅಂತ್ಯಗೊಳ್ಳುವವರೆಗೂ ಜಾಧವ್ ಮರಣದಂಡನೆಗೆ ತಡೆ ನೀಡಿ 2017 ಮೇ 18ರಂದು ಆದೇಶ ಹೊರಡಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *