ಮಡಿಕೇರಿ: 10 ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಕೊಲೆ ಮಾಡಲಾಗಿದ್ದು, ಶವ ಕಾಫಿ ತೋಟದಲ್ಲಿ ಪತ್ತೆಯಾಗಿದೆ.
ರಂಜಿತ್(21) ಮತ್ತು ಸಂದೀಪ್(30) ಬಂಧಿತ ಆರೋಪಿಗಳು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಿದ್ದಾಪುರ ಟಾಟಾ ಕಾಫಿ ತೋಟದ ಕಾರ್ಮಿಕ ಚಂದ್ರು ಪುತ್ರಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ಮೃತದೇಹ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಅಸ್ಸಾಂ ಮೂಲದ ಕಾರ್ಮಿಕರಿಬ್ಬರು ಈಕೆಯನ್ನು ಅಪಹರಿಸಿ ಪಕ್ಕದ ತೋಟದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ.
ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಅಪರಾಧ ಪತ್ತೆದಳ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ರಂಜಿತ್ ಮತ್ತು ಸಂದೀಪ್ ಮೂಲತಃ ಅಸ್ಸಾಂ ರಾಜ್ಯದವರಾಗಿದ್ದು, ಕರಡಿಕಾಡು ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 4ರಂದು ಮಧ್ಯಾಹ್ನ 3.30ರ ಸಮಯದಲ್ಲಿ ನೆಲ್ಯಹುದಿಕೇರಿಯಿಂದ ಕಾಲೇಜು ಮುಗಿಸಿ ಹಿಂತಿರುಗುತ್ತಿದ್ದ ಯುವತಿ ಮನೆ ಸಮೀಪವಿರುವ ಕೆರೆಯ ಬಳಿಯಿಂದ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿದ್ದಳು.
ಅಂತಿಮ ಕ್ಷಣದವರೆಗೂ ಯುವತಿ ಮುಂಬೈನಲ್ಲಿ ಉದ್ಯೋಗದಲ್ಲಿರುವ ತನ್ನ ಸಂಬಂಧಿ ಕಿಶೋರ್ ಎಂಬಾತನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗಿ ಆಕೆ ಅಪಹರಣವಾಗುತ್ತಿರುವ ರೀತಿಯಲ್ಲಿ ಕಿರುಚಿಕೊಂಡಿದ್ದು ಕಿಶೋರ್ ಗೆ ಮೊಬೈಲಿನಲ್ಲಿ ಕೇಳಿಸಿದೆ. ಕೂಡಲೇ ಈ ಬಗ್ಗೆ ಮನೆಯವರಿಗೆ ಮಾಹಿತಿ ರವಾನಿಸಿದ್ದಾನೆ. ಆ ಮೇರೆಗೆ ಎಲ್ಲೆಡೆ ಹುಡುಕಾಡಿದ್ದರೂ ಯುವತಿಯ ಇರುವಿಕೆಯ ಬಗ್ಗೆ ಮಾಹಿತಿ ಲಭಿಸಿರಲಿಲ್ಲ. ಆಕೆಯನ್ನು ಪತ್ತೆ ಹಚ್ಚುವಂತೆ ಎಲ್ಲೆಡೆ ಒತ್ತಡ ಹೆಚ್ಚಾಗಿತ್ತಲ್ಲದೇ ಪ್ರತಿಭಟನೆ ಕೂಡ ನಡೆದಿತ್ತು.
ವಿಶೇಷ ತಂಡ ರಚನೆ:
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಡಿವೈಎಸ್ಪಿ ಸುಂದರ್ ರಾಜ್ ಉಸ್ತುವಾರಿಯಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸ್ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಿ ಮಾರ್ಗದರ್ಶನ ನೀಡಿದ್ದರು. ಅದರಂತೆ ಪ್ರಕರಣದ ಜಾಡು ಹಿಡಿದ ತನಿಖಾ ತಂಡಗಳು ಎಮ್ಮೆಗುಂಡಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರನ್ನು ಅತೀ ಸೂಕ್ಷ್ಮವಾಗಿ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿವೆ. ಅದರಂತೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಪಕ್ಕದ ಕರಡಿಕಾಡು ತೋಟದಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ರಂಜಿತ್ ಎಂಬಾತನ ಮೇಲೆ ಬಲವಾದ ಶಂಕೆ ಮೂಡಿದೆ.
ಅವಮಾನ ಮಾಡಿದಕ್ಕೆ ಅತ್ಯಾಚಾರ:
ಆರೋಪಿ ರಂಜಿತ್ ನೀಡಿದ ಮಾಹಿತಿ ಮೆರೆಗೆ ಆತನ ಗೆಳೆಯ ಸಂದೀಪ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಕೂಡ ಈ ಕೃತ್ಯದಲ್ಲಿ ಪಾಲ್ಗೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದೀಗ ಪೊಲೀಸರ ತನಿಖಾ ತಂಡಗಳ ಯಶಸ್ವಿ ಕಾರ್ಯಾಚರಣೆಯಿಂದಾಗಿ ಆರೋಪಿಗಳಿಬ್ಬರೂ ಬಂಧನಕ್ಕೊಳಗಾಗಿದ್ದಾರೆ. ಯಾವುದೋ ಕಾರಣಕ್ಕೆ ಯುವತಿ ಆರೋಪಿ ರಂಜಿತ್ ಹಾಗೂ ಆತನ ಸ್ನೇಹಿತನೊಂದಿಗೆ ಜಗಳವಾಡಿ ಅವಮಾನಿಸಿದ್ದಳು ಎನ್ನಲಾಗಿದೆ. ಇದರಿಂದ ಅವಮಾನಿತನಾದ ರಂಜಿತ್ ಈ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಅಸ್ಸಾಂ ಮೂಲದ ಆತನ ಗೆಳೆಯ ಸಂದೀಪ್ ಜೊತೆ ಸೇರಿಕೊಂಡು ವ್ಯವಸ್ಥಿತವಾದ ಸಂಚನ್ನು ರೂಪಿಸಿದ್ದನು.
ಫೆ.4 ರಂದು ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ಆರೋಪಿಗಳಾದ ರಂಜಿತ್ ಮತ್ತು ಸಂದೀಪ್ ಕೆರೆ ಸಮೀಪದಿಂದ ಅಪಹರಿಸಿ ತೋಟದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಆಕೆ ಬದುಕುಳಿದರೆ ತೊಂದರೆಯಾಗಬಹುದೆಂದು ತಮ್ಮೊಂದಿಗೆ ತಂದಿದ್ದ ಹಗ್ಗದಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರು ಕಟ್ಟಿಸಿ ಸಾಯಿಸಿದ್ದಾರೆ. ನಂತರ ಆಕೆಯ ಮೃತದೇಹವನ್ನು ಯಾರಿಗೂ ಪತ್ತೆಯಾಗದ ರೀತಿಯಲ್ಲಿ ಎಮ್ಮೆಗುಂಡಿ ತೋಟದ ಗಣಪತಿ ದೇವಸ್ಥಾನದ ಕೆಳಭಾಗದಲ್ಲಿರುವ ಕಲ್ಲುಗುಡ್ಡದ ಬಂಡೆಯ ಕೆಳಭಾಗದಲ್ಲಿರುವ ಪೊದೆಯೊಳಗೆ ಹಾಕಿರೋದು ತನಿಖೆಯಿಂದ ದೃಢಪಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv