ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಆಗದವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ: ಮೋದಿ

Public TV
6 Min Read

– ಮಹಾಘಟಬಂಧನ್ ಅಲ್ಲ ಅದು ಮಹಾಮಿಲಾವಟ್
– ಕಾಂಗ್ರೆಸ್ ಮುಕ್ತ ಭಾರತ ಹೇಳಿದ್ದು ನಾನಲ್ಲ ಗಾಂಧೀಜಿ
– ಇತಿಹಾಸ ಕೆದಕಿ ಉದಾಹರಣೆ ಕೊಟ್ಟು ಕೈಗೆ ತಿರುಗೇಟು

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಈ ಅಧಿವೇಶನದ ಕೊನೆಯಲ್ಲಿ ದೀರ್ಘ ಭಾಷಣ ಮಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಇತಿಹಾಸವನ್ನು ಕೆದಕಿ ತಿರುಗೇಟು ನೀಡಿದರು. ದೇಶದ ಸರ್ಕಾರಿ ಸಂಸ್ಥೆಗಳು ಮೋದಿಯಿಂದ ಹಾಳಾಗುತ್ತದೆ ಎಂದು ದೂರಿದ ಕೈ ನಾಯಕರಿಗೆ ಅಭಿವೃದ್ಧಿ, ಭಾರತೀಯ ಸೇನೆ, ಚುನಾವಣಾ ಆಯೋಗ, ಭ್ರಷ್ಟಾಚಾರ ವಿಚಾರವನ್ನು ಎತ್ತಿ, ಒಂದೊಂದನ್ನೇ ಪ್ರಸ್ತಾಪಿಸಿ ಟೀಕಿಸಿದರು. ಕಾಂಗ್ರೆಸ್ ಅವಧಿಯಲ್ಲಿ ದೇಶ ಹೇಗಿತ್ತು ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲ ಬದಲಾವಣೆ ಆಗಿದೆ ಎನ್ನುವುದರ ಸಾಧನೆಯ ಪಟ್ಟಿಯನ್ನು ತೆರೆದಿಟ್ಟು ತನ್ನ ಮೇಲಿದ್ದ ಆರೋಪಗಳಿಗೆ ಉತ್ತರ ನೀಡಿದರು.

ತಮ್ಮ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷ ನಾಯಕರಿಗೆ ಧನ್ಯವಾದ ಹೇಳಿದ ಮೋದಿ, ದೇಶದ ಮತದಾರರು, ಯುವಜನತೆಗೆ ಮುಂದಿನ ಚುನಾವಣೆಗೆ ಶುಭ ಹಾರೈಸಿದರು. ಅಲ್ಲದೇ ನಮ್ಮ ಸರ್ಕಾರ ಪಾರದರ್ಶಕತೆಗೆ ಒತ್ತು ಕೊಟ್ಟಿದ್ದೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ಬಡವರ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅರ್ಥಪೂರ್ಣ ಹಾಗೂ ಆಧಾರರಹಿತ ಚರ್ಚೆಯನ್ನು ಸದನ ನೋಡಿದೆ ಎಂದು ಸರ್ಕಾರದ ಸಾಧನೆಗಳ ಪಟ್ಟಿಯನ್ನು ತೆದಿಟ್ಟು ವಿರೋಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಭಾಷಣದ ಹೈಲೈಟ್ಸ್:
ತುರ್ತು ಪರಿಸ್ಥಿತಿಯನ್ನು ಹೇರಿದ್ದು ಕಾಂಗ್ರೆಸ್, ಸೇನೆಗೆ ಅವಮಾನ ಮಾಡಿದ್ದು ಕಾಂಗ್ರೆಸ್, ಸೇನೆ ಮುಖ್ಯಸ್ಥರನ್ನು ಗುಂಡಾ ಎಂದು ಕರೆದು ಅವಮಾನ ಮಾಡಿದ್ದು ಈ ಕಾಂಗ್ರೆಸ್. ಆದರೆ ಸರ್ಕಾರಿ ಸಂಸ್ಥೆಯನ್ನು ನಾಶ ಮಾಡಲಾಗುತ್ತಿದೆ ಎಂದು ಮೋದಿಯನ್ನು ಆರೋಪಿಸಲಾಗುತ್ತಿದೆ. ಕಾಂಗ್ರೆಸ್ ಚುನಾವಣಾ ಆಯೋಗ ಮತ್ತು ಇವಿಎಂ ಪ್ರಶ್ನೆ ಮಾಡಿದ್ದರೂ ಮೋದಿಯಿಂದ ನಾಶ ಎಂದು ಹೇಳುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸುವುದು ಕಾಂಗ್ರೆಸ್. ಆದರೆ ಮೋದಿಯಿಂದಲೇ ನ್ಯಾಯಾಂಗಕ್ಕೆ ಧಕ್ಕೆ ಆಗಿದೆ ಎಂದು ಹೇಳುತ್ತಾರೆ. ಭಾರತೀಯ ಸೇನೆಯನ್ನು ದುರ್ಬಲಗೊಳಿಸಿದ್ದೆ ಕಾಂಗ್ರೆಸ್. ಸೇನೆಗೆ ಸರಿಯಾದ ಶಸ್ತ್ರಾಸ್ತ್ರಗಳನ್ನು ನೀಡದೇ, ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಆಗದವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಸಂವಿಧಾನ 356 ವಿಧಿಯಾದ ತುರ್ತು ಪರಿಸ್ಥಿತಿಯನ್ನು ಹೇರಿ ಹಲವು ಬಾರಿ ದುರ್ಬಳಕೆ ಮಾಡಿದೆ. ಆದರೆ ಈಗ ಸಂವಿಧಾನಿಕ ಸಂಸ್ಥೆ ಮೋದಿಯಿಂದ ದುರ್ಬಳಕೆ ಆಗುತ್ತಿದೆ ಎನ್ನುವ ಆರೋಪ ಮಾಡಲಾಗುತ್ತದೆ. 1959 ರಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕೇರಳದಲ್ಲಿದ್ದ ಕಮ್ಯೂನಿಸ್ಟ್ ಸರ್ಕಾರವನ್ನೇ ವಜಾಗೊಳಿಸಿತು. ಈಗ ಈ ಘಟನೆ ನಡೆದು 60 ವರ್ಷವಾಗಿದೆ. ಕೇರಳದ ಜನತೆ ಇದನ್ನು ಗಮನಿಸುತ್ತಿರುತ್ತಾರೆ.

ಮಹಾಘಟಬಂಧನ್ ನಿಂದ ಏನಾಗುತ್ತೋ ಮುಂದೆ ನೋಡಿ. ವಿರೋಧ ಪಕ್ಷಗಳ ಮಾಡಿರುವುದು ಮಹಾಘಟಬಂಧನ್ ಅಲ್ಲ. ಅದು ಮಹಾಮಿಲಾವಟ್(ಅತಿಕಲಬೆರಕೆ) ಆಗಿದ್ದು, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಹಾಘಟಬಂಧನ್ ಮಾರಕ ಆಗಲಿದೆ. ಕೇರಳದಲ್ಲಿ ಮಹಾಘಟಬಂಧನ್ ಏನಾಯ್ತು ಎನ್ನುವುದೇ ಇದಕ್ಕೆ ಉತ್ತಮ ಉದಾಹರಣೆ. ನೀವು ಈಗ ಬಸವಣ್ಣ ನವರ ವಚನಗಳನ್ನು ಓದಲು ಆರಂಭ ಮಾಡಿದ್ದೀರಿ ಆದರೆ, 25-30 ವರ್ಷಗಳ ಹಿಂದೆ ಓದಿದ್ದರೆ ನೀವು ತಪ್ಪು ದಾರಿಯಲ್ಲಿ ನಡೆಯುತ್ತಿರಲಿಲ್ಲ. ಕಾಂಗ್ರೆಸ್ ಮುಕ್ತ ಭಾರತ ನಾನು ಹೇಳಿದ್ದಲ್ಲ. ಕಾಂಗ್ರೆಸ್ ಮುಕ್ತ ಆಶಯವನ್ನು ವ್ಯಕ್ತಪಡಿಸಿದ್ದು ಮಹಾತ್ಮ ಗಾಂಧೀಜಿಯವರು. ಅವರು ಆಶಯವನ್ನು ನಾವು ಈಗ ಈಡೇರಿಸುತ್ತಿದ್ದೇವೆ ಅಷ್ಟೇ.

ನನ್ನ ಕಾಂಗ್ರೆಸ್ಸಿನ ಸ್ನೇಹಿತರು ಎರಡು ಅವಧಿಯನ್ನು ನೋಡಿರುತ್ತಾರೆ. ಬಿಫೋರ್ ಕಾಂಗ್ರೆಸ್(ಬಿಸಿ) ಅವಧಿಯಲ್ಲಿ ಏನು ಆಗಿಲ್ಲ, ಆಫ್ಟರ್ ಡೈನಸ್ಟಿ(ಎಡಿ) ಎಲ್ಲ ಅಭಿವೃದ್ಧಿ ಕಾರ್ಯ ನಡೆದಿದೆ. 2010ರ ಕಾಮನ್‍ವೇಲ್ತ್ ಗೇಮ್ಸ್ ನಮ್ಮ ಕ್ರೀಡಾಪಟುಗಳು ಪದಕಕ್ಕೆ ಶ್ರಮ ಪಡುತ್ತಿದ್ದರೆ ಕಾಂಗ್ರೆಸ್ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕೆಲವರು ತಮ್ಮ ವೈಯಕ್ತಿಕ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ನಿರತರಾಗಿದ್ದರು. ನಮ್ಮ ಸರ್ಕಾರ ಭ್ರಷ್ಟಾಚಾರ ವಿರುದ್ಧ ಕೆಲಸ ಮಾಡಿದೆ.

ಕಾಂಗ್ರೆಸ್ಸಿಗೆ ಸೇರುವುದು ಎಂದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಈ ಹಿಂದೆಯೇ ಹೇಳಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಬೆಲೆಗಳು ಏರಿಕೆ ಆಗುತ್ತಿದ್ದರೆ, ಎನ್‍ಡಿಎ ಅವಧಿಯಲ್ಲಿ ಬೆಲೆಗಳ ಬೆಲೆ ನಾವು ನಿಗಾ ಇಟ್ಟಿದ್ದೇವು. ಸೊಕ್ಕಿನಿಂದ ಮೆರೆದವವರ ಸಂಖ್ಯೆ 400 ರಿಂದ 44ಕ್ಕೆ ಇಳಿಕೆಯಾಗಿದೆ. ಬದ್ಧತೆ ಮತ್ತು ದೇಶದ ಅಭಿವೃದ್ಧಿಗೆ ಚಿಂತಿಸಿದವರ ಸಂಖ್ಯೆ 2 ರಿಂದ 282ಕ್ಕೆ ಏರಿಕೆಯಾಗಿದೆ. ಯಾರು ಈ ದೇಶವನ್ನು ಲೂಟಿ ಮಾಡಿದ್ದಾರೋ ಅವರಿಗೆ ನರೇಂದ್ರ ಮೋದಿಯ ಭಯ ಯಾವಾಗಲೂ ಇರುತ್ತದೆ.

ಕಾಂಗ್ರೆಸ್ ದೇಶವನ್ನು 55 ವರ್ಷ ಆಳ್ವಿಕೆ ಮಾಡಿದ್ದು, ಈ ಅವಧಿಯಲ್ಲಿ ಮಾಡಲಾಗದ ಸಾಧನೆಯನ್ನು 55 ತಿಂಗಳಿನಲ್ಲಿ ಎನ್‍ಡಿಎ ಸರ್ಕಾರ ಮಾಡಿದೆ. ನಿಮ್ಮ 55 ವರ್ಷಗಳ ಆಡಳಿತದಲ್ಲಿ ಅಂದರೆ 2014 ರವರೆಗೂ ದೇಶದ ನೈರ್ಮಲ್ಯದಲ್ಲಿ ಶೇ.40 ರಷ್ಟು ಮಾತ್ರ ಅಭಿವೃದ್ಧಿ ಆಗಿತ್ತು. ಆದರೆ 55 ತಿಂಗಳಿನಲ್ಲಿ ಅದು ಸುಮಾರು ಶೇ.98ಕ್ಕೆ ತಲುಪಿದೆ. 4.5 ವರ್ಷದಲ್ಲಿ 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ. ಈ ಮೂಲಕ ಸರ್ಕಾರ ಕೇವಲ ಶ್ರೀಮಂತರಿಗೆ ಮಾತ್ರ ಎಂದವರಿಗೆ ಹೌದು ಎಂದು ನಾನು ಹೇಳುತ್ತೇನೆ. ಏಕೆಂದರೆ ನಾನು ದೇಶದ ಜನರೇ ನನ್ನ ಶಕ್ತಿ. 55 ವರ್ಷಗಳಲ್ಲಿ 12 ಕೋಟಿ ಗ್ಯಾಸ್ ಸಂಪರ್ಕ ನೀಡಿದ್ದರೆ, 55 ತಿಂಗಳಿನಲ್ಲಿ 13 ಕೋಟಿ ಸಂಪರ್ಕಗಳನ್ನು ನೀಡಲಾಗಿದೆ. ದೇಶದ ಶೇ.50 ರಷ್ಟು ಜನರಿಗೆ ಲಭ್ಯವಾಗಿದ್ದ ಬ್ಯಾಂಕ್ ಸೇವೆ 55 ತಿಂಗಳಲ್ಲಿ ಶೇ.100 ಜನರಿಗೆ ತಲುಪಿದೆ.

2004, 2009 ಮತ್ತು 2014 ಚುನಾವಣೆಗಳಲ್ಲಿ ನೀವು ಬೋಗಸ್ ಭರವಸೆಗಳ ಸರಮಾಲೆ ನೀಡಿದ್ದೀರಿ. 3 ವರ್ಷದಲ್ಲಿ ಎಲ್ಲಾ ಹಳ್ಳಿಗಳು ವಿದ್ಯುತ್ ಸಂಪರ್ಕ ನೀಡುತ್ತೇನೆ ಎಂಬ ನಿಮ್ಮ ಭರವಸೆ ಹಾಗೆಯೇ ಇತ್ತು. ಅಲ್ಲದೇ ಸತತ 3 ಚುನಾವಣೆಗಳಲ್ಲಿ ಗರೀಬಿ ಹಠವೋ ಎಂದೇ ಹೇಳಿದ್ದೀರಿ. ಇದು ನನಗೆ ಶಾಕ್ ಆಗಿದೆ. ಏಕೆಂದರೆ ಬಡತನ ನಿರ್ಮೂಲನೆಗಾಗಿ ಇಂದಿಗೂ ನೀವು ನೀಡಿದ ಆ ಭರವಸೆಯನ್ನು ಈಡೇರಿಸಲು ನಮ್ಮ ಸರ್ಕಾರ ಪ್ರಯತ್ನ ನಡೆಸುತ್ತಿದೆ.

ಸೇನೆ, ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಗೆ ಕಾಂಗ್ರೆಸ್ ಅವಮಾನ ಮಾಡಿದೆ. ದೇಶದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆಯೇ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಸೇನೆ ಹಾಗೂ ನ್ಯಾಯಾಲಯದ ಬಗ್ಗೆ ಪ್ರಶ್ನೆ ಮಾಡುವ ಮೂಲಕ ಅವುಗಳ ಮೇಲಿನ ನಂಬಿಕೆಯನ್ನು ನಾಶ ಪಡಿಸಲು ಪ್ರಯತ್ನಿಸಿತ್ತು. ರಾಜಕೀಯ ಸ್ವಾರ್ಥಕ್ಕಾಗಿ ಸೇನೆಯ ಮುಖ್ಯಸ್ಥರ ಬಗ್ಗೆ ಪ್ರಶ್ನೆ ಮಾಡಿದ್ದೀರಿ. ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಧ್ವಂಸಗೊಳಿಸಿದ ಕಾಂಗ್ರೆಸ್ ಪ್ರತಿಯೊಂದು ಪ್ರಕರಣದ ಬಗ್ಗೆಯೂ ಸತ್ಯವನ್ನು ಮುಚ್ಚಿಟ್ಟು ಸುಳ್ಳಿನ ಸರಮಾಲೆಯನ್ನೇ ನಿರ್ಮಿಸಿದೆ. ದೇಶದ ಆಭಿವೃದ್ಧಿಗಾಗಿ ರಚನೆ ಮಾಡಿದ ಯೋಜನಾ ಆಯೋಗವನ್ನು ‘ಜೋಕರ್ಸ್ ಗ್ರೂಪ್’ ಎಂದು ಕರೆಯುವ ಮೂಲಕ ಅವಮಾನ ಮಾಡಲಾಯಿತು. ದೇಶದ ಸಂವಿಧಾನಕ್ಕೆ ನೀಡುವ ಗೌರವದ ರೀತಿ ಇದೆಯೇ?

ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 10 ವರ್ಷಕ್ಕೆ ಒಮ್ಮೆ ಎಂಬಂತೆ ರೈತರ ಸಾಲಮನ್ನಾ ಯೋಜನೆಯನ್ನು ಜಾರಿ ಮಾಡುವ ಉದ್ದೇಶ ಹೊಂದಿದ್ದೀರಾ? ಆದರೆ ಕೇಂದ್ರ ಸರ್ಕಾರದ ಯೋಜನೆ ಭಾಗವಾಗಿ ಹಿಂದೆಂದಿಗಿಂತಲೂ ನಮ್ಮ ಅವಧಿಯಲ್ಲಿ ಹೆಚ್ಚಿನ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈ ಹಿಂದೆ ಮಾಡಿದ್ದ ರೈತರ ಸಾಲಮನ್ನಾದ ಫಲ ರೈತರಿಗೆ ಸಿಕ್ಕಿಲ್ಲ. 43 ಲಕ್ಷ ರೈತರ ಪೈಕಿ 5 ಸಾವಿರ ರೈತರ ಸಾಲಮನ್ನಾ ಆಗೇ ಇಲ್ಲ. ಆದರೆ ಮುದ್ರಾ ಯೋಜನೆ ಅಡಿ 4.25 ಕೋಟಿ ಮಂದಿ ಸಾಲ ಸೌಲಭ್ಯ ಪಡೆದಿದ್ದಾರೆ. ಈ ಮೂಲಕ ಸ್ವಂತ ಉದ್ಯಮಗಳನ್ನು ಆರಂಭಿಸಿದ್ದಾರೆ.

ಮೋದಿಯನ್ನು ವಿರೋಧಿಸುವ ಭರದಲ್ಲಿ ವಿರೋಧ ಪಕ್ಷದ ನಾಯಕರು ಲಂಡನ್ ಹೋಗಿ ಭಾರತದ ವ್ಯವಸ್ಥೆಯನ್ನು ದೂಷಿಸುತ್ತಾರೆ. ವಿದೇಶದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಭಾರತಕ್ಕೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ವಾಯುಸೇನೆ ಬಲಶಾಲಿಯಾಗಿ ರೂಪುಗೊಳ್ಳುವುದು ಬೇಕಿರಲಿಲ್ಲ. ಯಾವ ಕಾರಣಕ್ಕೆ ನೀವು ರಫೇಲ್ ಒಪ್ಪಂದವನ್ನು ರದ್ದು ಮಾಡಲು ಆಗ್ರಹಿಸುತ್ತಿದ್ದೀರಿ. ಯಾವ ಕಂಪನಿ ಪರ ಮಾತನಾಡುತ್ತಿದ್ದೀರಿ ಎನ್ನುವ ಪ್ರಶ್ನೆಯನ್ನು ನಾನು ಕೇಳುತ್ತೇನೆ.

ಕಳೆದ 4 ವರ್ಷದಲ್ಲಿ ಭಾರತ ಹೂಡಿಕೆ, ಸ್ಟೀಲ್, ನವೋದ್ಯಮ, ಕೃಷಿ, ವಿಮಾನಯಾನ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದೆ. ಭವಿಷ್ಯದ ಯುವಜನತೆಯಲ್ಲಿ ಭವ್ಯ ಭಾರತದ ಭವಿಷ್ಯವಿದ್ದು, ಅವರು ಈ ದೇಶವನ್ನು ಬದಲಾಯಿಸುತ್ತಾರೆ. ದೇಶದ ಅಭಿವದ್ಧಿ ಸಂಬಂಧ ನಾವು ಸವಾಲುಗಳನ್ನು ಸ್ವೀಕರಿಸುತ್ತೇವೆ. ಜನರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *