ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಅವಾಂತರದಿಂದ ಸಾಕಷ್ಟು ನಷ್ಟವಾಗಿದ್ದು, ಎಲ್ಲವನ್ನೂ ಮರೆತಿರೋ ರಾಜ್ಯ ಸರ್ಕಾರ ಕೇಂದ್ರ ಕೊಟ್ಟ ಹಣವನ್ನಷ್ಟೇ ಪರಿಹಾರ ಘೋಷಿಸಿ ಸುಮ್ಮನಾಗಿದ್ದಕ್ಕೆ ಟೀಕೆ ಕೇಳಿ ಬಂದಿದೆ.
ರೈತರು ಎಕರೆಗಟ್ಟಲೆ ಜಾಗದಲ್ಲಿ ಬೆಳೆದಿದ್ದ ಭತ್ತ, ಕಾಫಿ ಸೇರಿ ಇತರೆ ಬೆಳೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಆದ್ರೆ ರಾಜ್ಯ ಸರ್ಕಾರ ಕೆಲವರಿಗೆ ಮಾತ್ರ ಕೇವಲ 999 ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಜೊತೆಗೆ ಈ ಹಣ ಪಡೆಯೋಕೆ ದಾಖಲೆ ಕೂಡಾ ಕೊಡಬೇಕು ಎಂದು ಸುತ್ತೋಲೆ ಹೊರಡಿಸಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಕೇಂದ್ರ ಸರ್ಕಾರ ಇತ್ತೀಚಿಗೆ ರಾಜ್ಯಕ್ಕೆ ಬಿಡುಗಡೆ ಮಾಡಿದ 546 ಕೋಟಿ ಹಣದಲ್ಲಿ ಬೆಳೆ ಪರಿಹಾರವಾಗಿ ಈ ಹಣವನ್ನ ಜಿಲ್ಲೆಯ ರೈತರಿಗೆ ನೀಡಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನ ಪ್ರಶ್ನಿಸಿದ್ದಕ್ಕೆ ಎನ್ಡಿಆರ್ಎಫ್ ಬೆಳೆ ಪರಿಹಾರದ ಮಾನದಂಡದಲ್ಲಿ ಈ ಹಣ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕೊಡಗು ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ರಚನೆಯಾಗಿದ್ದು, ಇದರಲ್ಲಿ ಸೂಕ್ತ ಪರಿಹಾರವನ್ನ ಸಂತ್ರಸ್ತ ರೈತರಿಗೆ ನೀಡಲಾಗುವುದು ಎಂದು ಸಚಿವರೇನೋ ಹೇಳಿದ್ದಾರೆ. ಆದ್ರೆ ಕಳೆದುಕೊಂಡಿರುವ ಆಸ್ತಿ-ಬೆಳೆಗಳ ದಾಖಲೆಗಳನ್ನ ಕೊಡಲು ಸಾವಿರಾರು ರೂ. ಖರ್ಚು ಮಾಡಿಕೊಂಡು ರೈತರು ಸಂಬಂಧಪಟ್ಟ ಇಲಾಖೆಗಳಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಈ ಬೆನ್ನಲ್ಲೆ ಕಳೆದುಕೊಂಡಿರೋ ಎಕರೆಗಟ್ಟಲೇ ಆಸ್ತಿ ಹಾಗೂ ಬೆಳೆಗೆ ಕೇವಲ ಮೂರಂಕಿಯ ಪರಿಹಾರ ಬಂದಿರೋದು ನೋಡಿ ದಂಗಾಗಿ ಹೋಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv