ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಬಿಟ್ಟ ಸರ್ಕಾರ

Public TV
2 Min Read

ಬೆಂಗಳೂರು: ಗಣರಾಜ್ಯೋತ್ಸವದ ದಿನದಂದು ರಾಜ್ಯ ಸರ್ಕಾರ ಸಿಲಿಕಾನ್ ಸಿಟಿ ಜನರಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ, ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಟ್ಟು ಕಾಂಕ್ರೀಟ್ ಬ್ರಿಡ್ಜ್ ನಿರ್ಮಿಸಲು ನಿರ್ಧರಿಸಿದೆ.

ಹೌದು, 2 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಸಾವಿರಾರು ಕೋಟಿ ವೆಚ್ಚದ ಸ್ಟೀಲ್ ಬ್ರಿಡ್ಜ್ ಅನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಅನ್ನುತ್ತಿದ್ದ ಸರ್ಕಾರ ಇದೀಗ ಹಿಂದೆ ಸರಿದಿದ್ದು, ಸ್ಟೀಲ್ ಬ್ರಿಡ್ಜ್ ಬದಲಾಗಿ ಕಾಂಕ್ರೀಟ್ ಬ್ರಿಡ್ಜ್ ಮತ್ತು ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಮಾಡಲು ತೀರ್ಮಾನಿಸಿದೆ.

ಹೊಸ ಯೋಜನೆಯ ಪ್ರಕಾರ ಬಿಡಿಎ ಕಚೇರಿಯಿಂದ ಹೆಬ್ಬಾಳದವರೆಗೆ ಬ್ರಿಡ್ಜ್ ಮತ್ತು ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣವಾಗಲಿದೆ. ಇದರಿಂದ ಸ್ಟೀಲ್ ಬ್ರಿಡ್ಜ್‍ಗೆ ವ್ಯಯ ಮಾಡಲು ನಿರ್ಧಾರ ಮಾಡಿದ್ದ ಹಣಕ್ಕಿಂತ ಕಡಿಮೆ ವೆಚ್ಚ ಅಂದ್ರೆ 600 ರಿಂದ 700 ಕೋಟಿ ರೂಪಾಯಿಯಲ್ಲಿ ಈ ಕಾಂಕ್ರೀಟ್ ಬ್ರಿಡ್ಜ್ ನಿರ್ಮಿಸಲಿದೆ. ಉದ್ದೇಶಿತ ಬ್ರಿಡ್ಜ್ ಯಾವ ರೀತಿ ಇರುತ್ತೆ ಎಂದು ಮಾಹಿತಿಯನ್ನು ಸರ್ಕಾರ ತಿಳಿಸಿದೆ.  ಇದನ್ನೂ ಓದಿ: ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

ಬಿಡಿಎನಿಂದ ಏರ್‌ಪೋರ್ಟ್‌ ರಸ್ತೆಯವರೆಗೆ ಸಿಗ್ನಲ್ ಫ್ರೀ ಕಾರಿಡಾರ್, ಕಾವೇರಿ ಜಂಕ್ಷನ್‍ನಲ್ಲಿ ಹೊಸ ಬ್ರಿಡ್ಜ್, ಸಹಕಾರ ನಗರ ಹೋಗುವ ರೋಡ್‍ನಲ್ಲಿ ಸಿಗ್ನಲ್ ಫ್ರೀ ಸರ್ವಿಸ್ ರಸ್ತೆ ಹಾಗೂ ಹೆಬ್ಬಾಳ ಪೊಲೀಸ್ ಸ್ಟೇಷನ್‍ನಿಂದ ಏರ್‌ಪೋರ್ಟ್‌ ಟೋಲ್ ರಸ್ತೆಯವರೆಗೆ ಕಾಂಕ್ರೀಟ್ ಬ್ರಿಡ್ಜ್ ನಿರ್ಮಿಸಲು ಸರ್ಕಾರ ಯೋಜನೆ ಮಾಡಿದೆ. ಉಳಿದಂತೆ ಯೋಜನೆ ಅಡಿಯಲ್ಲಿ ಬರುವ ಎಲ್ಲಾ ಮಾರ್ಗದಲ್ಲಿ ಸರ್ವಿಸ್ ರಸ್ತೆಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಪ್ಲಾನ್ ಮಾಡಿದೆ.

ಸರ್ಕಾರದ ಈ ಮಹತ್ವಪೂರ್ಣ ನಿರ್ಧಾರವನ್ನು ಸ್ವಾಗತ ಮಾಡಿರೋ ಸಾಮಾಜಿಕ ಕಾರ್ಯಕರ್ತರು, ನಾವು ಅಭಿವೃದ್ಧಿ ಕಾರ್ಯಕ್ಕೆ ವಿರೋಧ ಮಾಡಿಲ್ಲ. ಆದ್ರೆ ಸ್ಟೀಲ್ ಬ್ರಿಡ್ಜ್‍ನಿಂದ ಹೆಚ್ಚಿನ ಹಣ ವ್ಯಯವಾಗುತ್ತೆ ಅನ್ನೋದೇ ನಮ್ಮ ವಿರೋಧವಾಗಿತ್ತು. ಸರ್ಕಾರದ ಕಾಂಕ್ರೀಟ್ ಬ್ರಿಡ್ಜ್ ನಿರ್ಮಾಣದ ತೀರ್ಮಾನವನ್ನ ನಾವು ಸ್ವಾಗತ ಮಾಡುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಅದೇನೆ ಆದರೂ ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಸರ್ಕಾರ ಹಿಂದೆ ಸರಿದಿರೋದು ನಿಜಕ್ಕೂ ಸ್ವಾಗತರ್ಹ. ಈಗ ಹಾಕಿಕೊಂಡ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲಿ ಅನ್ನೋದೇ ಎಲ್ಲರ ಆಶಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *