ಬೆಳಗ್ಗೆ ಮಾನ ಮರ್ಯಾದೆ, ಕಾಮನ್‍ಸೆನ್ಸ್ ಇಲ್ವಾ ಎಂದ ಕೆಪಿಸಿಸಿ ಅಧ್ಯಕ್ಷರು ಸಂಜೆ ಕ್ಷಮೆ ಕೇಳಿದ್ರು!

Public TV
2 Min Read

ಬೆಂಗಳೂರು: ಮಾಧ್ಯಮದವರಿಗೆ ಮಾನ ಮರ್ಯಾದೆ ಇಲ್ವಾ..? ಕಾಮನ್‍ಸೆನ್ಸ್ ಇಲ್ವಾ ಎಂದು ಕೇಳಿದ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೊನೆಗೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.

ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಶಾಸಕ ಗಣೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲು ಆಗಮಿಸಿದ್ದರು. ಇದನ್ನು ವರದಿ ಮಾಡಲು ಆಗಮಿಸಿದ್ದ ಮಾಧ್ಯಮಗಳಿಗೆ ದಿನೇಶ್ ಗುಂಡೂರಾವ್ ಅವರು, ನಿಮಗೆ ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಕಚೇರಿ, ಇವರು ಪಕ್ಷದ ಒಳಗಿನ ವಿಚಾರ ಮಾತನಾಡಲು ಬಂದಿದ್ದಾರೆ. ಇದನ್ನೆಲ್ಲಾ ಶೂಟ್ ಮಾಡಲು ನಿಮಗೆ ಕಾಮನ್ ಸೆನ್ಸ್ ಇಲ್ವಾ ಎಂದೆಲ್ಲಾ ಕೇಳುತ್ತಾ ಮಾಧ್ಯಮ ಪ್ರತಿನಿಧಿಗಳ ಮೇಲೆ ತಮ್ಮ ವಾಕ್ಚತುರ್ಯ ಪ್ರದರ್ಶನ ಮಾಡಿದ್ದರು.

ಯಾವಾಗ ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭವಾಯಿತೋ ದಿನೇಶ್ ಗುಂಡೂರಾವ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಲ್ಲಿ ಕ್ಷಮೆ ಯಾಚಿಸಿದರು. ನಮ್ಮ ಚೇಂಬರ್ ನಲ್ಲಿ ಆಂತರಿಕ ಸಭೆ ನಡೆಯುತ್ತಿತ್ತು. ಈ ವೇಳೆ ಕಂಪ್ಲಿ ಕಾರ್ಯಕರ್ತರು ಬಂದಾಗ ಮನವಿ ಸ್ವೀಕಾರ ಮಾಡುತ್ತಿದ್ದೆ. ಆದರೆ ಮಾಧ್ಯಮದವರು ಇರೋದು ಗೊತ್ತಿರಲಿಲ್ಲ. ಆಗ ತಕ್ಷಣ ಮಾಧ್ಯಮದವ್ರು ಬಂದಿರೋದು ನೋಡಿ ಹೊರಗೆ ಹೋಗಿ ಎಂದು ತಮ್ಮಿಂದಾದ ತಪ್ಪಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಮಾಧ್ಯಮದವರು ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಉತ್ತಮ ಸಂಬಂಧ ಇದೆ. ಆ ಸಂದರ್ಭದಲ್ಲಿ ಬಾಯಿ ತಪ್ಪಿ ಕೆಲವು ಮಾತುಗಳು ನನ್ನಿಂದ ಬಂದವು. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮದವರ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.

ನಾನೇ ಸಭೆಯಿಂದ ಹೊರಗಿದ್ದೆ!: ಬೆಳಗ್ಗೆ ನಡೆದ ಸಭೆಯಲ್ಲಿ ನನ್ನನ್ನು ಹೊರಗಿಟ್ಟು ಸಭೆ ನಡೆಸಿಲ್ಲ. ಅನೇಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜೊತೆ ಮುಕ್ತವಾಗಿ ಮಾತಾಡುವುದಿತ್ತು. ಹಾಗಾಗಿ ನಾನೇ ಸಭೆಯಲ್ಲಿ ಇರಲ್ಲ ಎಂದು ಹೇಳಿದ್ದೆ. ಎಲ್ಲರೂ ಅಭಿಪ್ರಾಯ ನೀಡುವಾಗ ಅವರಿಗೆ ಮುಜುಗರ ಆಗಬಾರದು. ಅದಕ್ಕಾಗಿ ನಾನು ಹೊರಗೆ ಇದ್ದೆ. ಅಧ್ಯಕ್ಷರನ್ನು ಹೊರಗಿಟ್ಟು ಸಭೆ ಮಾಡುವ ಸನ್ನಿವೇಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಜೆ.ಎನ್.ಗಣೇಶ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಕಾನೂನು ಪ್ರಕಾರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೂ ಈ ಥರಾ ತಲೆ ತಪ್ಪಿಸಿಕೊಳ್ಳಬಾರದು. ಕಾನೂನಿಗೆ ಎಲ್ಲರೂ ಬೆಲೆ ಕೊಡಬೇಕಾಗುತ್ತದೆ. ಕಾಂಗ್ರೆಸ್ ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದರು.

ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನ ರೆಸಾರ್ಟಿಗೆ ಕರೆದೊಯ್ದಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪರಸ್ಪರ ಬಡಿದಾಡಿಕೊಂಡ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಆರಂಭದಿಂದಲೂ ಭಿನ್ನ ಹೇಳಿಕೆಗಳನ್ನ ನೀಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದರು. ಆ ಬಳಿಕ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ ವಿರುದ್ಧ ದೂರು ನೀಡುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗಣೇಶ್ ರನ್ನು ಅಮಾನತು ಮಾಡಿದ್ದರು. ಸದ್ಯ ಗಣೇಶ್ ಬಂಧನದ ಭಯದಿಂದ ನಾಪತ್ತೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *