ಸಿದ್ದಗಂಗಾ ಮಠಕ್ಕೆ ಪ್ರವೇಶಿಸುವ 2 ಗೇಟ್‍ ಬಂದ್

Public TV
2 Min Read

ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಸದ್ಯ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಆದರೂ ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪ್ರವೇಶಿಸುವ ಎರಡೂ ಗೇಟ್ ಗಳನ್ನೂ ಬಂದ್ ಮಾಡಲಾಗಿದೆ.

ಎರಡು ಗೇಟ್ ಗಳ ಬಳಿಯೂ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಣ್ಯರು, ಮಠದ ಸಿಬ್ಬಂದಿ, ಮಠದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಮಾಡಿಕೊಡಲಾಗಿದೆ. ಸಾರ್ವಜನಿಕರು, ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

ಶ್ರೀಗಳ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಮಠದಲ್ಲಿ ವಿದ್ಯಾರ್ಥಿಗಳು ಶ್ರೀಗಳ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಮಠಕ್ಕೆ ಸಾವಿರಾರು ಮಂದಿ ಭಕ್ತರು ಹಾಗೂ ಗಣ್ಯರು ಇಂದು ಬೆಳಗ್ಗಿನಿಂದಲೇ ಆಗಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಮಂತ್ರಿ ಎಂಬಿ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಇಂದಿನ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಠದತ್ತ ತೆರಳಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.


ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಇಂದು, ಹೊಸಮಠದ ಕಿರಿಯ ಶ್ರೀಗಳ ಕಚೇರಿಯಲ್ಲಿ ಎಸ್ಪಿ, ಡಿಸಿ, ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಠದ ಎಲ್ಲಾ ಗೇಟ್ ಗಳಲ್ಲೂ ಹೈ ಸೆಕ್ಯೂರಿಟಿ ನೀಡುವಂತೆ ಸೂಚನೆ ನೀಡಿದ್ದಾರೆ. ಎಲ್ಲಾ ವಿಐಪಿ ವಾಹನಗಳಿಗೂ ಗೇಟ್‍ನ ಹೊರಗಡೆಯೇ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಬೇಕು. ಈಗಿನಿಂದಲೇ ಸಾರ್ವಜನಿಕರ ಪ್ರವೇಶ ಬಂದ್ ಮಾಡಿ ಮಠದ ಎಲ್ಲಾ ಗೇಟ್ ಗಳಲ್ಲೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳಿಗೆ ನಿಶ್ಯಕ್ತಿ ತುಂಬಾ ಕಡಿಮೆ ಇದ್ದು, ಕಳೆದ ದಿನ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *