ಒಂದು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ: ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ

Public TV
2 Min Read

– ಮೋಜು-ಮಸ್ತಿ ಮಾಡಿಲ್ಲ, ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದೆ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇನ್ನೊಂದು ತಿಂಗಳಲ್ಲಿ ಸಿಎಂ ಆಗುತ್ತಾರೆ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

ಗುರುಗ್ರಾಮದ ರೆಸಾರ್ಟ್ ನಿಂದ ಉಡುಪಿಗೆ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆಶ್ಚರ್ಯಕರ, ಚಮತ್ಕಾರದ ರೀತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಬರುತ್ತಾರೆ. ಅದ್ಯಾವ ಮ್ಯಾಜಿಕ್ ಮಾಡಿ ಹೇಗೆ ಸಿಎಂ ಆಗ್ತಾರೆ ಅಂತ ನಾನು ಈಗ ಹೇಳಲ್ಲ. ನೀವೇ ನೋಡಿ. ಯಡಿಯೂರಪ್ಪ ಈ ತಿಂಗಳು ಕಳೆಯುವ ಒಳಗೆ ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.

ದೆಹಲಿ, ಹರಿಯಾಣದಲ್ಲಿ ನಾನು ಮೋಜು ಮಸ್ತಿ ಮಾಡಿಲ್ಲ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡೆ. ಅದನ್ನು ಮುಗಿಸಿ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ ನಡೆಯಿತು. ಅಲ್ಲಿಂದ ಹರಿದ್ವಾರಕ್ಕೆ ಹೋಗಿದ್ದೆ. ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದ್ದೇನೆ. ಮೂರು ಸಾರಿ ಮುಳುಗಿ ಎದ್ದೆ. ನಾನು ನನ್ನ ಕ್ಷೇತ್ರ ಮರೆಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರ, ರಾಜ್ಯ ಮತ್ತು ದೇಶದ ಜನಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಶಾಸಕರನ್ನು ಕೂಡಿ ಹಾಕಿದ್ದಾರೆ ಎಂದು ಪ್ರಸಾರವಾಗುತ್ತಿತ್ತು. ಕೂಡಿ ಹಾಕಲು ನಾನು ಮಗು ಅಲ್ಲ ಅಂತ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದರು.

ಸನ್ಯಾಸಿಗೆ ಕೋಟಿ ಯಾಕೆ?
ನಾನೊಬ್ಬ ಸನ್ಯಾಸಿಯಂತೆ ಬದುಕುವ ವ್ಯಕ್ತಿ. ನನಗೆ ಅಧಿಕಾರವೂ ಬೇಡ, ಕೋಟಿಯೂ ಬೇಡ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಅಂತ ಅಂದರು. ಬಿಜೆಪಿ ತೊರೆಯುವ ವಿಚಾರ ಒಂದು ಮಾಧ್ಯಮದಲ್ಲಿ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಅಪಪ್ರಚಾರವಾಗಿದೆ. ನಾನೊಬ್ಬ ಪ್ರಖರ ಹಿಂದುತ್ವವಾದಿ. ನಾನು ಬಿಜೆಪಿ ಬಿಡಲ್ಲ. ಸನ್ಯಾಸಿ ಜೀವನ ನಡೆಸುವವನಿಗೆ ಹಣ, ಅಧಿಕಾರ ಆಮಿಷದ ಅಗತ್ಯವಿಲ್ಲ. ಗಂಜಿ ಊಟ ಮಾಡುವವನಿಗೆ ಕೋಟಿ ಯಾಕೆ ಬೇಕು ಎಂದು ಪ್ರಶ್ನಿಸಿದರು.

ಇಷ್ಟಕ್ಕೂ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರನ್ನು ನೋಡಿ 18 ವರ್ಷ ಆಗಿದೆ. ತಿಂಗಳ ಹಿಂದೆ ಯು.ಟಿ ಖಾದರ್ ಪರಿಚಯ ಆಗಿದೆ. ಕಾಂಗ್ರೆಸಿಗರು ನನ್ನನ್ನು ಈವರೆಗೆ ಸಂಪರ್ಕ ಮಾಡಿಯೇ ಇಲ್ಲ. ನಾನು ಯಡಿಯೂರಪ್ಪನವರ ಅತೀ ಹತ್ತಿರದ ವ್ಯಕ್ತಿ. ಜನ ಬಿಜೆಪಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅಪಪ್ರಚಾರ ಮಾಡಿದವರ ವಿರುದ್ಧ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿ ಶಾಸಕ ಸುಕುಮರ ಶೆಟ್ಟಿ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *