ಆಪರೇಷನ್ ಕಮಲ ಫೇಲಾಗಿದ್ದರ ಹಿಂದಿದೆ ಬಿಎಸ್‍ವೈ ಮಿಸ್ಟೇಕ್ಸ್!

Public TV
1 Min Read

-ಧರ್ಮ & ರಾಜಕಾರಣದ ನಡುವೆ ಸಿಲುಕಿದ್ರಾ ಯಡಿಯೂರಪ್ಪ!

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿಯ ಮಾಹಾಕ್ರಾಂತಿ ಎಂದೇ ಬಿಂಬಿಸಲಾಗಿದ್ದ ಆಪರೇಷನ್ ಕಮಲ ಕೈ ಕೊಟ್ಟಿದೆ. ದಂಡನಾಯಕನಾಗಿ ವಿರೋಧಿ ಬಣದ ಸೇನಾನಿಗಳನ್ನೇ ತನ್ನತ್ತ ಸೆಳೆದು ಕಾಂಗ್ರೆಸ್-ಜೆಡಿಎಸ್ ಕೋಟೆಯನ್ನೇ ಧ್ವಂಸಿಸಿ ಮತ್ತೆ ಸಿಂಹಾಸನ ಏರುವ ಛಲದೊಂದಿಗೆ ಚಕ್ರವ್ಯೂಹ ಹೂಡಿದ್ದರು ಕೇಸರಿ ಸಾರಥಿ ಯಡಿಯೂರಪ್ಪ. ಆದ್ರೆ ಯುದ್ಧ ಘೋಷಿಸಿದ ಸಮಯ ಸಂದರ್ಭ ತಂತ್ರ ಫಲಿಸಲು ವಿರುದ್ಧವಾಗಿತ್ತು. ಧರ್ಮ ಮತ್ತು ರಾಜಕಾರಣ ಹೀಗೆ ಆ ಕಡೆಯೋ ಈ ಕಡೆಯೋ ಎಂದು ನಿರ್ಧಾರ ಮಾಡುವುದೇ ಬಿಎಸ್‍ವೈ ಸವಾಲಾಯ್ತು.

ಯಡಿಯೂರಪ್ಪ ಮಾಡಿದ ತಪ್ಪುಗಳು:
ಒಂದು ಕಡೆ ಆಪರೇಷನ್ ಕಮಲದ ಚಿಂತೆ, ಮತ್ತೊಂದೆಡೆ ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಸುದ್ದಿ ಎಲ್ಲರನ್ನು ಗೊಂದಲಕ್ಕೀಡು ಮಾಡಿತು. ಅಪರೇಷನ್ ಕಮಲಕ್ಕೆ ಇದು ಸೂಕ್ತ ಸಮಯವಲ್ಲ ಎಂಬ ಚರ್ಚೆಗಳು ಬಿಜೆಪಿ ನಾಯಕರಲ್ಲಿ ಆರಂಭವಾದವಂತೆ. ನಡೆದಾಡುವ ದೇವರ ಅನಾರೋಗ್ಯದ ಹೊತ್ತಲ್ಲಿ ಪ್ರಶ್ನೆಯಾಗಿ ಕಾಡಿದ ‘ಗುರುಗ್ರಾಮದ ರೆಸಾರ್ಟ್ ರಾಜಕಾರಣ’ ಬೇಕಿತ್ತಾ ಎಂಬುವುದು ಬಿಜೆಪಿಯ ಕೆಲ ಶಾಸಕರ ವಾದವಾಗಿತ್ತು ಎಂಬ ಮಾಹಿತಿಗಳು ಲಭ್ಯವಾಗಿವೆ.

ರೆಸಾರ್ಟ್ ನಲ್ಲೇ ಉಳಿಯಬೇಕೇ..? ತಾನೊಬ್ಬನ್ನೇ ಬರಬೇಕೇ, ಶಾಸಕರನ್ನೂ ವಾಪಸ್ ಕರೆದುಕೊಂಡು ಬರಬೇಕೆ..? ಅಷ್ಟೊತ್ತಿಗಾಗಲೇ ಬಿಜೆಪಿ ತನ್ನದೇ ಶಾಸಕರನ್ನ ಕೂಡಿಟ್ಟ ತಂತ್ರಗಾರಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಯ್ತು. ಆದ್ರೆ ಲಿಂಗಾಯತ ಸಮುದಾಯದ ಹಿರಿಯ ನಾಯಕನಾಗಿ ಶ್ರೀಗಳ ಆರೋಗ್ಯ ವಿಚಾರಿಸಲು ಬರದೇ ಇದ್ದರೆ ಹೇಗೆ..? ಎಂಬ ಪ್ರಶ್ನೆ ಯಡಿಯೂರಪ್ಪರನ್ನು ಕಾಡಿದೆ. ಕೊನೆಗೆ ಎಲ್ಲರನ್ನು ಗುರುಗ್ರಾಮದಲ್ಲಿರುವಂತೆ ಸೂಚಿಸಿ ಯಡಿಯೂರಪ್ಪನವರು ರಾಜ್ಯಕ್ಕೆ ಆಗಮಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲ ನಾಯಕರು ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಲಿಂಗಾಯತ ಮುಖಂಡನಾದ ನಾನು ಶ್ರೀಗಳ ಆರೋಗ್ಯ ವಿಚಾರಿಸದೇ ಇದ್ರೆ ಲೋಕಸಭಾ ಚುನಾವಣೆಯಲ್ಲಿ ವಿರೋಧಿಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಬಹುದು ಆತಂಕ ಯಡಿಯೂರಪ್ಪರಲ್ಲಿ ಮನೆ ಮಾಡಿತು. ಒಂದು ವಿಷಯದ ಮೇಲೆ ಕೇಂದ್ರಿಕೃತವಾಗಲು ಯಡಿಯೂರಪ್ಪರಿಂದ ಅಸಾಧ್ಯವಾಗಿದ್ದರಿಂದ ಅಪರೇಷನ್ ಕಮಲ ವಿಫಲವಾಯ್ತು ಎಂಬ ವಾದಗಳಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *