ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗ ಮೇಲೆ ಅತ್ತೆಯಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

Public TV
1 Min Read

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದ ಕನಕದುರ್ಗ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿದ್ದು, ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಜನವರಿ 2 ರಂದು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿದ್ದರು. ದೇವಾಲಯದ ಸಂಪ್ರದಾಯವನ್ನು ಮುರಿದ ಇಬ್ಬರ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಜೀವಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಇಬ್ಬರನ್ನು ಕೊಚ್ಚಿ ಬಳಿಯ ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.

ಕೇರಳದ ನಾಯರ್ ಸಮುದಾಯದ 39 ವರ್ಷದ ಕನಕದುರ್ಗ ಅಜ್ಞಾತ ಸ್ಥಳದಿಂದ ಮಂಗಳವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಮನೆಗೆ ಬಂದಕೂಡಲೇ ಅತ್ತೆ ಕನಕದುರ್ಗ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದ್ದು ಈಗ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮನೆಗೆ ಕನಕದುರ್ಗ ಬಂದ ಕೂಡಲೇ ಅತ್ತೆ ಮತ್ತು ಸೊಸೆ ನಡುವೆ ಜಟಾಪಟಿ ನಡೆದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಅತ್ತೆ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಮೇಲೆ ಸೊಸೆ ಕನಕದುರ್ಗ ಹಲ್ಲೆ ಮಾಡಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾರೆ.

ದೇವಾಲಯ ಪ್ರವೇಶಿಸಿ ದೇಶವ್ಯಾಪಿ ಸುದ್ದಿಯಾಗಿದ್ದ ಕನಕದುರ್ಗ ಅವರ ಪತಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಕನಕದುರ್ಗ ಮತ್ತು ನಮಗೂ ಯಾವುದೇ ಸಂಬಂಧ ಇಲ್ಲ ಎಂದು  ಕುಟುಂಬದ ಸದಸ್ಯರು ಪ್ರತಿಕ್ರಿಯಿಸಿದ್ದರು.

ಬಿಂದು ಮತ್ತು ಕನಕದುರ್ಗ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ, ವಿಐಪಿ ಮತ್ತು ಮಾಧ್ಯಮಗಳ ಪ್ರವೇಶಕ್ಕೆ ಇರುವ ದ್ವಾರದ ಮೂಲಕ ಜ.2ರ ಬುಧವಾರ ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ.

44 ವರ್ಷ ಬಿಂದು ತಲಶೇರಿಯಲ್ಲಿ ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *