ಪಶ್ವಿಮಘಟ್ಟದಲ್ಲಿ ಭೂ ಸ್ತರಭಂಗ-ಭೂಕಂಪನದ ಬಗ್ಗೆ ಭೂ ವಿಜ್ಞಾನಿ ಎಚ್ಚರಿಕೆ

Public TV
1 Min Read

ಉಡುಪಿ: ಜಿಲ್ಲೆಯ ಬೈಂದೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಅನುಭವವಾದ ಭೂಕಂಪನ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಪಾಲದ ಭೂ ವಿಜ್ಞಾನಿ ಉದಯ ಶಂಕರ್ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಭೂಮಿ ಮೇಲೆ ಮನುಷ್ಯನ ದಾಳಿಯಿಂದಲೇ ಇಂತಹ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಗಣಿಗಾರಿಕೆ, ಬುಲ್ಡೋಜರ್‍ಗಳ ಬಳಕೆ, ಕಾಡು ನಾಶದಂತಹ ವಿಪರೀತ ಆಟಾಟೋಪಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ನಾವು ಅಂದುಕೊಳ್ಳುವ ಹಾಗೆ ಪರಿಸ್ಥಿತಿ ಇರುವುದಿಲ್ಲ ಎಂದು ಭೂ ವಿಜ್ಞಾನಿ ಉದಯ ಶಂಕರ್ ಭಟ್ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲೆಯ ಗೋಳಿಬೇರು, ಕ್ಯಾರ್ತೂರು ಸಾರಂಗಿ, ಗಂಗನಾಡು, ಅತ್ಯಾಡಿಯಲ್ಲಿ ಭೂಕಂಪನದ ಮಾಹಿತಿ ಸಿಕ್ಕಿದೆ. ಪಶ್ಚಿಮ ಘಟ್ಟದಲ್ಲಿ ಆದ ಭೂ ಸ್ತರಭಂಗ(ಭೂ ಕುಸಿತ) ಇದಕ್ಕೆ ಕಾರಣ. ಪಶ್ಚಿಮ ಘಟ್ಟದ ಉದ್ದಕ್ಕೂ ಈ ಹಿಂದೆಯೇ ಸ್ತರಭಂಗವಾಗಿದೆ. ಈ ಜಾಗದಲ್ಲೇ ಮತ್ತೆ ಭೂಕುಸಿತ ಆಗಿರಬಹುದು. ಇದರಿಂದಾಗಿ ಭೂ ಕಂಪನದ ಅನುಭವ ಆಗುತ್ತದೆ. ಜೋರಾದ ಶಬ್ಧ ಕೇಳಿಬರುತ್ತದೆ ಎಂದು ಹೇಳಿದ್ದಾರೆ.

ಭೂಕಂಪನ ಅನ್ನೋದು ಸ್ವಾಭಾವಿಕ ಪ್ರಕ್ರಿಯೆ. ಆ ಭಾಗದಲ್ಲಿ ಜೆಸಿಬಿ ಬಳಕೆ- ಕಲ್ಲುಕೋರೆಯ ಸ್ಫೋಟದಿಂದ ಸ್ತರಭಂಗ ಆಗಿರಬಹುದು. ಪಶ್ಚಿಮಘಟ್ಟದ ಸರಣಿಯಲ್ಲಿ ಈ ಹಿಂದೆಯೇ ಭೂಮಿ ಬಿರುಕು ಬಿಟ್ಟಿತ್ತು. ಸದ್ಯ ಆಗಿರೋದು ಭೂಮಿಯ ಸ್ಟ್ರೆಸ್ ರಿಲೀಸ್ ಪ್ರೊಸೀಜರ್ ಅಷ್ಟೆ. ಮನುಷ್ಯನ ಚಟುವಟಿಕೆಗಳು ಹಿಡಿತದಲ್ಲಿ ಇರಬೇಕು, ಭೂಮಿಯ ಮೇಲೆ ಅಟ್ಟಹಾಸ ಕಮ್ಮಿ ಮಾಡಿದರೆ ಇಂತಹ ಬೆಳವಣಿಗೆಯನ್ನು ತಡೆಗಟ್ಟಬಹುದು ಎಂದು ಉದಯ ಶಂಕರ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *