– ನಾನು 29 ವರ್ಷ ಪಾರ್ಲಿಮೆಂಟ್ ನೋಡಿದ್ದೇನೆ
– ಶೀಘ್ರವೇ ಸೀಟ್ ಹೊಂದಾಣಿಕೆ ಮಾತುಕತೆ
ಬೆಂಗಳೂರು: ನಾನು ಇಪ್ಪತ್ತೊಂಬತ್ತು ವರ್ಷ ಪಾರ್ಲಿಮೆಂಟ್ ನೋಡಿದ್ದೇನೆ. ಮೊದಲು ಪಕ್ಷ ಕಟ್ಟುವುದು ನನ್ನ ಜವಾಬ್ದಾರಿ. ಆಮೇಲೆ ಸ್ಪರ್ಧೆಯ ಮಾತು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗುಡುಗಿದ್ದಾರೆ.
ನಗರದ ಜಿಪಿ ಭವನದಲ್ಲಿ ಪಕ್ಷದ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜೊತೆಗೆ ದೇವೇಗೌಡ ಅವರು ಮಾತನಾಡಿದರು. ಈ ವೇಳೆ ಲೋಕಸಭಾ ಚುನಾವಣೆಗೆ ನೀವು ಯಾವ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಜಿ ಪ್ರಧಾನಿ ಗರಂ ಆಗಿ ಪ್ರತಿಕ್ರಿಯಿಸಿದರು.
ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಎಚ್ಡಿಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು, ಸಚಿವರು ಸಮ್ಮಿಶ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ರೀತಿ ಹೇಳಿಕೆ ಕೊಡಬಾರದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡೂ ಪಕ್ಷಗಳ ನೇತೃತ್ವ ವಹಿಸಿಕೊಂಡಿದ್ದು, ಜವಾಬ್ದಾರಿ ಹೊರಲು ಅವರಿಗೆ ಕಷ್ಟ ಆಗಬಹುದು. ಹೀಗಾಗಿ ಶಾಸಕರು ಅವರ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಪುತ್ರ ಹಾಗೂ ಸಿಎಂ ಕುಮಾರಸ್ವಾಮಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊರಲು ಆಸಕ್ತಿ ಇರುವ ಶಾಸಕರು ಮುಂದೆ ಬರಲಿ. ಅವರಿಗೆ ಬೆಂಬಲ ನೀಡುತ್ತೇವೆ. ಆದರೆ ಪ್ರಮುಖ ತೀರ್ಮಾನಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದ ಅವರು, ಕಾಂಗ್ರೆಸ್ಗೆ 130 ವರ್ಷಗಳ ಇತಿಹಾಸವಿದೆ. ಆದರೆ ಇಂದು ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಆಡಳಿತದಲ್ಲಿದೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯವಾಗಿ ಕಳೆದ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಕುರಿತು ಯುವಕರಿಗೆ ತಿಳಿಸಬೇಕು. ರಾಜ್ಯದಲ್ಲಿ ಪಕ್ಷದ ಸಂಘಟನೆ ಚುರುಕಾಗಿದ್ದು, ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದೇವೆ ಎಂದು ಅವರು, ಲೋಕಸಭಾ ಚುನಾವಣಾ ಕ್ಷೇತ್ರಗಳ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ. ಮುಂದಿನ ಎರಡು ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv