ಬೆಳಗಾವಿ: ತವರು ಮನೆಯಿಂದ ಗಂಡನ ಮನೆಗೆ ಬರಲು ಒಪ್ಪದ ಪತ್ನಿಯ ತುಟಿ ಹಾಗೂ ಮೂಗನ್ನು ಕತ್ತರಿಸಿ ಪಾಪಿ ಪತಿ ವಿಕೃತಿ ಮೆರೆದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಈ ಘಟನೆ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುನಿತಾ ಸುರೇಶ್ ನಾಯಿಕ್(27) ಅವರು ಪತಿ ಸುರೇಶ್ ಪರಶುರಾಮ್ ನಾಯಿಕ್ ನಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ.
ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಜೊತೆ ಸುನಿತಾಗೆ 2 ವರ್ಷದ ಹಿಂದೆ ವಿವಾಹವಾಗಿತ್ತು. ಆದ್ರೆ ಮದುವೆಯಾದಾಗಿನಿಂದ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿತ್ತು. ಹೀಗಾಗಿ ಸುನಿತಾ ತನ್ನ ತವರು ಮನೆಗೆ ಹೋಗಿದ್ದರು.
ಪತ್ನಿ ತವರು ಮನೆಗೆ ಹೋಗಿ ವಾಪಸ್ಸಾಗದಿದ್ದರಿಂದ ಆಕೆಯನ್ನು ಕರೆದುಕೊಂಡು ಬರಲೆಂದು ಸುರೇಶ್, ಭಾನುವಾರ ಪತ್ನಿ ಮನೆಗೆ ತೆರಳಿದ್ದ. ಈ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ಸುರೇಶ್, ಸುನಿತಾ ಅವರ ತುಟಿ ಹಾಗೂ ಮೂಗನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಸುನಿತಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv