ಚಲಿಸುತ್ತಿರುವ ರೈಲಿನಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆ..!

Public TV
1 Min Read

ಅಹಮದಾಬಾದ್: ಹಿರಿಯ ಬಿಜೆಪಿ ಮುಖಂಡ, ಮಾಜಿ ಶಾಸಕ ಜಯಂತಿ ಭಾನುಶಾಲಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದ ಘಟನೆ ಇಂದು ನಡೆದಿದೆ.

ಈ ಘಟನೆ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಭುಜ್- ದಾದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. 53 ವರ್ಷದ ಭಾನುಶಾಲಿ ಅವರು ಗುಜರಾತ್ ನ ಕುಚ್ ಜಿಲ್ಲೆಯ ಭುಜ್ ನಿಂದ ಅಹಮದಾಬಾದ್ ನತ್ತ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಗಾಂಧಿಧಾಮ ಮತ್ತು ಸುರಜ್ಬಾರಿ ರೈಲು ನಿಲ್ದಾಣಗಳ ಮಧ್ಯದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧೀಕ್ಷಕ ಕರಣ್ ರಾಜ್ ವಾಘೆಲಾ ತಿಳಿಸಿದ್ದಾರೆ.

ಭುಜ್- ದಾದರ್ ಎಕ್ಸ್ ಪ್ರೆಸ್ ನ ರೈಲ್ವೇ ಅಧಿಕಾರಿಗಳು ಭಾನುಶಾಲಿ ಮೃತಪಟ್ಟಿರುವುದಾಗಿ ಮೊರ್ಬಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ರೈಲು ಮೊರ್ಬಿಯ ಮಲಿಯಾ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ರೈಲಿನಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ 2 ಗುಂಡುಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ರು.

ಸದ್ಯ ಭಾನುಶಾಲಿಗೆ ಹೊಡೆದ 2 ಗುಂಡುಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ರೈಲ್ವೇ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಅಂತ ವಾಘೇಲಾ ತಿಳಿಸಿದ್ದಾರೆ.

ಅತ್ಯಾಚಾರ ಆರೋಪ ಎದುರಿಸುತ್ತಿದ್ದುದರಿಂದ ಭಾನುಶಾಲಿ ಅವರು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಗುಜರಾತ್ ನ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಮಹಿಳೆ ದೂರನ್ನು ಹಿಂತೆಗೆದುಕೊಂಡಿದ್ದರಿಂದ ಗುಜರಾತ್ ಹೈಕೋರ್ಟ್ 2018ರ ಆಗಸ್ಟ್ ತಿಂಗಳಲ್ಲಿ ಈ ಪ್ರಕರಣವನ್ನು ಕೈಬಿಟ್ಟಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *