ಬಾಕ್ಸಿಂಗ್ ಡೇ ಟೆಸ್ಟ್: ಐತಿಹಾಸಿಕ ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ

Public TV
2 Min Read

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವಿನ ಸನಿಹದಲ್ಲಿದ್ದು, ಗೆಲ್ಲಲು ಕೇವಲ 2 ವಿಕೆಟ್ ಮಾತ್ರ ಬೇಕಿದೆ.

ಪಂದ್ಯದ 4ನೇ ದಿನದಾಟದಲ್ಲಿ ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್ ತಂಡ 2ನೇ ಇನ್ನಿಂಗ್ಸ್ ನಲ್ಲಿ 253 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಗೆಲುವು ಪಡೆದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಲಿದೆ.

4ನೇ ದಿನದಾಟವನ್ನು 5 ವಿಕೆಟ್ ಕಳೆದುಕೊಂಡು 54 ರನ್ ಗಳಿಂದ ಆರಂಭಿಸಿದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿತು. ಇದರೊಂದಿಗೆ 399 ರನ್ ಗಳ ಸವಾಲಿನ ಮೊತ್ತವನ್ನು ಆಸೀಸ್‍ಗೆ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಮಯಾಂಕ್ ಅಗರ್ವಾಲ್ 42 ರನ್ ಗಳಿಸಿ ಔಟಾಗುವ ಮೂಲಕ ಪಾದಾರ್ಪಣೆ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ದಾಖಲೆ ಮುರಿಯುವ ಅವಕಾಶದಿಂದ ವಂಚಿತರಾದರು. ಗವಾಸ್ಕರ್ 1971 ರ ಪಾದಾರ್ಪಣೆ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಇತ್ತ ಸವಾಲಿನ ಮೊತ್ತ ಬೆನ್ನತ್ತಿದ್ದ ಆಸೀಸ್ ತಂಡದ ವಿರುದ್ಧ ಬಿಗಿ ಬೌಲಿಂಗ್ ದಾಳಿ ನಡೆಸಿ ಇಂಡಿಯಾ ಬೌಲರ್ ಗಳು ಮಾರಕವಾದರು. ಆಸೀಸ್ ಪರ ಮಾರ್ಷ್ 44 ರನ್, ಹೇಡ್ 34 ರನ್, ಖವಾಜಾ 33 ರನ್ ಹಾಗೂ ಅಂತಿಮ ಹಂತದಲ್ಲಿ ಕಮ್ಮಿನ್ಸ್ 41* ಮತ್ತು ಲಯನ್ 1* ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಜಡೇಜಾ 3 ವಿಕೆಟ್, ಬುಮ್ರಾ, ಶಮಿ ತಲಾ 2 ವಿಕೆಟ್  ಹಾಗೂ  ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಹಾಗೂ 2ನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಪಡೆದ ಬುಮ್ರಾ ಒಟ್ಟು 8 ವಿಕೆಟ್ ಪಡೆದು ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು.

ಸಂಕ್ಷಿಪ್ತ ಸ್ಕೋರ್:
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ – 443/7 ಡಿಕ್ಲೇರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 151 ಅಲೌಟ್
ಟೀಂ ಇಂಡಿಯಾ 2ನೇ ಇನ್ನಿಂಗ್ಸ್ – 106/8 ಡಿಕ್ಲೇರ್
ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ _ 253/8*

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *