63ರ ಅಜ್ಜನಿಗೆ ನೆನಪಾಯ್ತು 30 ವರ್ಷ ಹಿಂದಿನ ಲವ್ ಕಹಾನಿ

Public TV
2 Min Read

-ಹಳೇ ಲವ್ವರ್ ನೆನೆದು ಕಟ್ಟಿಕೊಂಡ ಪತ್ನಿಗೇ ಗುಂಡಿಟ್ಟು ಕೊಂದ

ಚಿಕ್ಕಮಗಳೂರು: ನಿವೃತ್ತ ಶಿಕ್ಷಕನೊಬ್ಬ ತನ್ನ ಪತ್ನಿಗೆ ಗುಂಡಿಟ್ಟು ಕೊಂದು ಬಳಿಕ ಠಾಣೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದೆ.

63 ವರ್ಷದ ಮುದುಕ ಶಿಕ್ಷಕನಿಗೆ 30 ವರ್ಷದ ಹಿಂದಿನ ಲವ್ ಕಹಾನಿ ನೆನಪಾಗಿದ್ದು, ತನ್ನ ಹಳೆಯ ದ್ವೇಷದಿಂದಲೇ ಕಟ್ಟಿಕೊಂಡ ಹೆಂಡತಿಯನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ.

ಬಸವರಾಜಪ್ಪ 35 ವರ್ಷಗಳ ಕಾಲ ಶಿಕ್ಷಕನಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಚುಗಾರನಹಳ್ಳಿ ನಿವಾಸಿಯಾಗಿದ್ದಾನೆ. ಈತ 35 ವರ್ಷಗಳ ಕಾಲ ಶಿಕ್ಷಕ ವೃತ್ತಿ ಮಾಡಿ ಈಗ ನಿವೃತ್ತಿ ಪಡೆದಿದ್ದಾನೆ. ಕಳೆದ ಸೋಮವಾರ ರಾತ್ರಿ ತನ್ನ ಪತ್ನಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಆರು ವರ್ಷದ ಹಿಂದೆಯೇ ತನ್ನ ಪತ್ನಿ ಜಯಮ್ಮಗೆ ಡಿವೋರ್ಸ್ ನೀಡಿದ್ದ ಬಸವರಾಜಪ್ಪ, ತವರು ಮನೆಯಲ್ಲಿದ್ದ ಜಯಮ್ಮ ಸ್ನಾನ ಮಾಡಿ ಬರುವ ವೇಳೆ ಏಕಾಏಕಿ ಮನೆಗೆ ನುಗ್ಗಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯಿಂದ ರಕ್ತದ ಮಡುವಿನಲ್ಲಿ ಬಿದ್ದ ಜಯಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜಯಮ್ಮಳಿಗೆ ಬಸವರಾಜಪ್ಪ ಕಳೆದ 30 ವರ್ಷಗಳಿಂದ ಕಿರುಕುಳ ನೀಡುತ್ತಿದ್ದನು. ಎರಡ್ಮೂರು ಬಾರಿ ಬುರುಡೆ ಬಿಚ್ಚಿ ತವರಿಗೆ ಕೂಡ ಅಟ್ಟಿದ್ದನು. 6 ವರ್ಷದ ಹಿಂದೆ ಡಿವೋರ್ಸ್ ನೀಡಿ ಬೇರೆ ಇದ್ದರು. ಇಷ್ಟಕ್ಕೆಲ್ಲಾ ಆಫ್ಟರ್ ಮ್ಯಾರೇಜ್ ಲವ್ ಸ್ಟೋರಿಯೇ ಕಾರಣ. ಶಿಕ್ಷಕನಾಗಿದ್ದಾಗ ಸಹ ಉದ್ಯೋಗಿಯನ್ನು ಬಸವರಾಜಪ್ಪ ಲವ್ ಮಾಡಿದ್ದನು. ಪತ್ನಿಗೆ ಡಿವೋರ್ಸ್ ನೀಡಿ ಆಕೆಯನ್ನ ಮದುವೆಯಾಗೋಕೆ ಯತ್ನಿಸಿದ್ದನು. ಸಾಧ್ಯವಾಗದಿದ್ದಕ್ಕೆ ಕಳೆದ 30 ವರ್ಷಗಳಿಂದ ಸ್ನೇಹಿತ ಹಾಗೂ ಪತ್ನಿ ಮೇಲೆ ಹಗೆ ಸಾಧಿಸಿ ಕೊಲೆ ಮಾಡಿದ್ದಾನೆ.

ಪತ್ನಿಯನ್ನ ಹತ್ಯೆ ಮಾಡಿದ ಕೂಡಲೇ ಗ್ರಾಮಸ್ಥ ಹಾಗೂ 60 ವರ್ಷದ ಸ್ನೇಹಿತ ಮರುಳಸಿದ್ದಪ್ಪ ಎಂಬವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಸಿದ್ದಪ್ಪ ಹಾಗೂ ಆತನ ಮಗನ ಮೇಲೆ ಮನಸ್ಸೋ ಇಚ್ಛೆ ದೊಣ್ಣೆ ಬೀಸಿದ್ದಾನೆ. ಅವರಿಬ್ಬರಿಗೂ ಬಲವಾದ ಗಾಯಗಳಾಗಿದ್ದು ಆಸ್ಪತ್ರೆ ಸೇರಿದ್ದಾರೆ. ಬಸಪ್ಪನ ಲವ್ ಸ್ಟೋರಿ ಹಳ್ಳ ಹತ್ತಲೂ ಸಿದ್ದಪ್ಪನೇ ಕಾರಣ ಎಂದು ಸಿದ್ದಪ್ಪನ ಮೇಲೆ ಬಸಪ್ಪ 30 ವರ್ಷಗಳಿಂದ ಹಗೆ ಸಾಧಿಸುತ್ತಿದ್ದನು.

ಗಾಯಾಳು ಸಿದ್ದಪ್ಪ ಹೇಳುವ ಪ್ರಕಾರ, ಬಸವರಾಜಪ್ಪ ಜಯಮ್ಮನ ಮದುವೆಯಾದ ಬಳಿಕವೂ ಬೇರೆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಲೂ ಯತ್ನಿಸಿದ್ದನು. ಆಗ ಪತ್ನಿ ಜಯಮ್ಮನಿಗೆ ಡಿವೋರ್ಸ್ ನೀಡಿ ಬೇರೆ ಹುಡುಗಿಯನ್ನು ಮದುವೆಯಾಗೋದಾಗಿ ಸ್ನೇಹಿತ ಸಿದ್ದಪ್ಪ ಬಳಿ ಹೇಳಿಕೊಂಡಿದ್ದನು. ಈತ ಪ್ರೀತಿಸುತ್ತಿದ್ದ ಹುಡುಗಿಯ ಮನೆಯವರ ಜೊತೆ ತನಗೆ ಮದುವೆಯಾಗಿಲ್ಲ ಎಂದು ಹೇಳಿ ಮಾತನಾಡಿ ಒಪ್ಪಿಸು ಎಂದಿದ್ದ. ಇದಕ್ಕೆ ಸಿದ್ದಪ್ಪ ಒಪ್ಪದ ಕಾರಣ ಅಂದಿನಿಂದ ಹಗೆ ಸಾಧಿಸ್ತಿದ್ದನು. ಆದರೆ ಸಿದ್ದಪ್ಪ ನಿವೃತ್ತ ಶಿಕ್ಷಕ ಬಸವರಾಜಪ್ಪ ಪತ್ನಿ ಜಯಮ್ಮ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು ಎಂಬ ಮಾತುಗಳು ಕೇಳಿ ಬರುತ್ತಿದೆ.

ಹಳೆಯ ಸ್ನೇಹವೊಂದು ಅಕ್ರಮ ಸಂಬಂಧ ಹಾಗೂ ಪ್ರೀತಿಯ ವ್ಯಾಮೋಹಕ್ಕೆ ಬಿದ್ದು ಜೀವನದ ಸಂಧ್ಯಾಕಾಲದಲ್ಲಿ ಹಳೆಯ ದ್ವೇಷ ಜ್ವಾಲಾಮುಖಿಯಂತೆ ಉಕ್ಕಿ ಹರಿದಿದ್ದು ಒಂದು ಜೀವವನ್ನು ಬಲಿತೆಗೆದುಕೊಂಡಿದೆ. ಜೊತೆಗೆ ಇಬ್ಬರು ಸ್ನೇಹಿತರಲ್ಲಿ ಓರ್ವ ಜೈಲು ಪಾಲಾದರೆ ಮತ್ತೋರ್ವ ಆಸ್ಪತ್ರೆ ಪಾಲಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *