ಪೇಜಾವರ ಶ್ರೀಗಳ ಗುರುವಂದನೆ ಕಾರ್ಯಕ್ರಮ – ವಿಶ್ವೇಶತೀರ್ಥ ಸ್ವಾಮೀಜಿಗೆ ರಾಷ್ಟ್ರಪತಿ ದಂಪತಿ ಅಭಿನಂದನೆ

Public TV
2 Min Read

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಗುರುವಂದನೆ ಕಾರ್ಯಕ್ರಮ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಆಗಮಿಸಿದ್ದರು. ಸನ್ಯಾಸ ಸ್ವೀಕರಿಸಿ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೇಜಾವರ ಸ್ವಾಮಿಗಳನ್ನು ಗೌರವಿಸಿ, ಕೃಷ್ಣನ ದರ್ಶನ ಪಡೆದು ರಾಮಜಪ ಮಾಡಿದರು.

ದೇಶದ ಹಿರಿಯ ಸಂತ ಪೇಜಾವರ ಶ್ರೀಗಳು ಸನ್ಯಾಸ ಸ್ವೀಕರಿಸಿ 80 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣನ ಅಂಗಳದಲ್ಲಿ ಯತಿಶ್ರೇಷ್ಠ ಪೇಜಾವರ ಶ್ರೀ ಪಾದರಿಗೆ ಗುರುವಂದನೆ ಕಾರ್ಯಕ್ರಮ ಆಯೋಜನೆಯಾಗಿತ್ತು. ಪೇಜಾವರ ಶ್ರೀಗಳ ನೆಚ್ಚಿನ ಶಿಷ್ಯೆ ಸಾದ್ವಿ ಉಮಾ ಭಾರತಿ ಆಶಯದಂತೆ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಪ್ರಥಮ ಪ್ರಜೆ ಇವತ್ತು ಕೃಷ್ಣನಗರಿಗೆ ಆಗಮಿಸಿದ್ದರು.

ಪೇಜಾವರ ಮಠಕ್ಕೆ ಆಗಮಿಸಿದ ರಾಷ್ಟ್ರಪತಿಗಳು, ಸ್ವಾಮೀಜಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ಮಠದ ವತಿಯಿಂದಲೂ ರಾಷ್ಟ್ರಪತಿಗಳಿಗೆ ಯಕ್ಷ ಕಿರೀಟ ತೊಡಿಸಿ ಸನ್ಮಾನ ಮಾಡಲಾಯಿತು. ಈ ವೇಳೆ ಮಾತನಾಡಿದ ರಾಷ್ಟ್ರಪತಿಗಳು, ಶ್ರೀರಾಮ ಈ ದೇಶದ ಮರ್ಯಾದಾ ಪುರುಷೋತ್ತಮ. ರಾಮನ ಜೀವನಾದರ್ಶ ನಮಗೆಲ್ಲಾ ಮಾದರಿ. ರಾಮ ರಾಜ್ಯವೇ ಆದರ್ಶ ರಾಜ್ಯ. ರಾಮನ ಆದರ್ಶ ಪಾಲಿಸಿದರೆ ದೇಶ ಸುಖಿಯಾಗಿರುತ್ತದೆ ಎಂದರು.

ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಿದ್ದ, ಪೇಜಾವರ ಸ್ವಾಮಿಗಳ ಶಿಷ್ಯೆ, ಕೇಂದ್ರ ಸಚಿವೆ ಉಮಾಭಾರತಿ ಅವರು ಸಂಸತ್ತಿನಲ್ಲಿ ವಿಪ್ ಜಾರಿಯಾದ ಕಾರಣ ಇಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಉಳಿದಂತೆ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ನಾಗಾಲ್ಯಾಂಡ್ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ ಆಚಾರ್ಯ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು.

ಕಾರ್ಯಕ್ರಮದ ಬಳಿಕ ಕೆಲ ಸಮಯ ಪೇಜಾವರ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಠಮಠಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪೇಜಾವರ ಶ್ರೀಗಳು ರಾಷ್ಟ್ರಪತಿಗಳನ್ನು ಗೌರವಿಸಿ, ಅವರಿಗೆ ಶ್ರೀಕೃಷ್ಣ ಸಹಿತ ಬೆಳ್ಳಿ ಪ್ರಭಾವಳಿ ನೀಡಿ ಗೌರವಿಸಿದರು. ಈ ವೇಳೆ ಪೇಜಾವರ ಕಿರಿಯ ಶ್ರೀಗಳು, ಪರ್ಯಾಯ ಶ್ರೀಗಳು ಉಪಸ್ಥಿತರಿದ್ದರು. ಪಾಜಕ ಕ್ಷೇತ್ರದಲ್ಲಿ ಮಧ್ವ ಯುನಿವರ್ಸಿಟಿ ಸ್ಥಾಪನೆಗೆ ಸಹಕಾರ ಮತ್ತು ಮಧ್ವ ದಿನಾಚರಣೆ ಪ್ರಾರಂಭಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಈ ಮೊದಲು ಮಠದ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸುವ ಯೋಚನೆ ಇತ್ತು. ಆದರೆ ಭದ್ರತೆಯ ಕಾರಣಕ್ಕಾಗಿ ಉಡುಪಿಯಲ್ಲಿ ಸಾರ್ವಜನಿಕ ಸಭೆ ನಡೆಸಲು ಅವಕಾಶ ನೀಡಿಲ್ಲ. ಉಮಾ ಭಾರತಿ ನೇತೃತ್ವದಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಗುರುವಂದನೆಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರು ಅಥವಾ ನವದೆಹಲಿಯಲ್ಲಿ ಆಯೋಜಿಸುವ ಚಿಂತನೆ ನಡೆದಿದೆ. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಭಂದ ವಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *