ಅಪ್ಪನಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬಿ.ಸಿ ಪಾಟೀಲ್ ಮಗಳು ಗರಂ..!

Public TV
2 Min Read

ಬೆಂಗಳೂರು: ತಂದೆಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಹೈಕಮಾಂಡ್ ವಿರುದ್ಧ ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ರಾಮಲಿಂಗಾ ರೆಡ್ಡಿ ಪುತ್ರಿ ಆಯ್ತು, ಈಗ ಬಿಸಿ ಪಾಟೀಲ್ ಪುತ್ರಿಯ ಸರದಿ ಎಂಬಂತೆ ಸೃಷ್ಠಿ ಪಾಟೀಲ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. ಸಚಿವ ಸ್ಥಾನ ಕೊಡದೇ ಇರೋದು ಬಿಸಿ ಪಾಟೀಲಿಗೆ ಮಾಡಿದ ದೊಡ್ಡ ಅನ್ಯಾಯ. ಹಿರೇಕೆರೂರು-ರಟ್ಟೇಹಳ್ಳಿ ತಾಲೂಕಿಗೆ ಮಾಡಿದ ದೊಡ್ಡ ಅನ್ಯಾಯ. ಬಿಸಿ ಪಾಟೀಲ್‍ಗೆ ಸಚಿವ ಸ್ಥಾನದ ಅರ್ಹತೆ ಇದ್ದರೂ ಕಾಂಗ್ರೆಸ್ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಿಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಕೆಂಡಕಾರಿದ್ದಾರೆ. ಇದನ್ನೂ ಓದಿ: ರಾಮಲಿಂಗಾರೆಡ್ಡಿಗೆ ಕೈ ತಪ್ಪಿದ ಸಚಿವ ಸ್ಥಾನ- ಅಸಮಾಧಾನ ಹೊರ ಹಾಕಿದ ಶಾಸಕಿ ಸೌಮ್ಯ ರೆಡ್ಡಿ

ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸೃಷ್ಠಿ ಪಾಟೀಲ್, ಅಪ್ಪಾಜಿಗೆ ಸಚಿವ ಸ್ಥಾನ ಕೊಡದಿರುವುದಕ್ಕೆ ಅಸಮಾಧಾನವಿದೆ. ಅವರಿಗೆ ಸಚಿವರಾಗಲು ಎಲ್ಲಾ ಅರ್ಹತೆ ಇದೆ. ಮೂರು ಬಾರಿ ಶಾಸಕರಾಗಿದ್ದಾರೆ, ಪಕ್ಷನಿಷ್ಠೆ ತೋರಿದ್ದಾರೆ. ಇಡೀ ಹಾವೇರಿ ಜಿಲ್ಲೆಗೆ ಬಿ.ಸಿ ಪಾಟೀಲ್ ಅವರು ಏಕೈಕ ಕಾಂಗ್ರೆಸ್ ನಾಯಕರಾಗಿದ್ದಾರೆ. ಅಲ್ಲದೆ ಕಳೆದ 38 ವರ್ಷಗಳಿಂದ ಹಿರೇಕೆರೂರು ತಾಲೂಕಿಗೆ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿಲ್ಲ. ಹೀಗೆ ಮಾಡಿದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕೆಂದರೆ ಎಲ್ಲಿಂದ ಆಗುತ್ತೆ? ಇದು ದೊಡ್ಡ ಅನ್ಯಾಯ ಎಂದು ಕಿಡಿಕಾರಿದ್ದಾರೆ.

https://twitter.com/shrustipatil_/status/1076290848562790400

ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಲು ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಕಾಂಗ್ರೆಸ್ ನಾಯಕರೊಡನೆ ಮಾತನಾಡಿದ್ದೆವು. ಸ್ವಾರ್ಥಕ್ಕಾಗಿ ಸಚಿವ ಸ್ಥಾನವನ್ನು ಕೇಳುತ್ತಿಲ್ಲ ಅಭಿವೃದ್ಧಿ ಕೆಲಸವನ್ನು ಮಾಡಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಒಳಗೆ ಏನು ನಡೀತಿದೆ ಅಂತಾ ಗೊತ್ತಿಲ್ಲ. ಯಾವ ಆಧಾರದ ಮೇಲೆ ಪಕ್ಷದವರು ಸಚಿವ ಸ್ಥಾನ ಕೋಡ್ತಾರೆ, ಯಾಕೆ ಅರ್ಹತೆ ಇರುವವರಿಗೆ ಅಧಿಕಾರ ಕೊಡುತ್ತಿಲ್ಲ ಅಂತಾ ಅರ್ಥವಾಗ್ತಿಲ್ಲ. ಹೈಕಮಾಂಡ್ ಅವರು ಏನು ನಿರ್ಧಾರ ಮಾಡ್ತಾರೆ ಅಂತಾ ನೋಡೋಣ ಎಂದು ಅಪ್ಪಾಜಿ ಹೇಳಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರಿಗೂ ಬೇಸರವಿದೆ. ಈ ಭಾಗದ ಜನರಿಗೂ ಬೇಸರವಾಗಿದೆ. ಮುಂದೆ ಯಾವ ತೀರ್ಮಾನಕ್ಕೆ ಹೈಕಮಾಂಡ್ ಬರುತ್ತೆ ಅಂತಾ ಕಾದು ನೋಡುವುದಾಗಿ ಅವರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *