5 ದಿನಗಳವರೆಗೆ ಬ್ಯಾಂಕ್ ರಜೆ- ಸಾಲಮನ್ನಾ ಯೋಜನೆ ದಾಖಲಾತಿ ಸಲ್ಲಿಸಲು ಬ್ಯಾಂಕ್ ಮುಂದೆ ರೈತರ ಕ್ಯೂ

Public TV
2 Min Read

ಯಾದಗಿರಿ: ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಐದು ದಿನಗಳ ಕಾಲ ರಜೆ ಇದ್ದು, ಸಾಲಮನ್ನಾ ಯೋಜನೆ ದಾಖಲಾತಿ ಸಲ್ಲಿಸಲು ಜಿಲ್ಲೆಯ ವಿವಿಧ ಬ್ಯಾಂಕ್ ಗಳ ಮುಂದೆ ರೈತರು ಕ್ಯೂ ನಿಂತಿದ್ದಾರೆ.

ರಾಜ್ಯದ ಸಮ್ಮಿಶ್ರ ಸರ್ಕಾರ ಈಗಾಗಲೇ ರೈತರ ಎರಡು ಲಕ್ಷ ರೂಪಾಯಿವರೆಗಿನ ಸಾಲಮನ್ನಾ ಘೋಷಣೆ ಮಾಡಿದೆ. ನಿಗದಿತ ಸಮಯದ ಒಳಗೆ ದಾಖಲಾತಿ ಸಲ್ಲಿಸಲು ಬ್ಯಾಂಕುಗಳು ಸೂಚಿಸಿದ್ದು, ಸಾಲಮನ್ನಾ ಯೋಜನೆಯ ಲಾಭ ಪಡೆಯಲು ರೈತರು ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ದಾರೆ. ಆದರೆ ಐದು ದಿನಗಳು ರಜೆ ಇರುವ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ಮುಂದೆ ಮತ್ತಷ್ಟು ಕ್ಯೂ ಹೆಚ್ಚಾಗಿದೆ.

ವಿವಿಧ ಬೇಡಿಕೆ ಈಡೇರಿಕೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳು ಎರಡು ದಿನ ಮುಷ್ಕರ ನಡೆಸಲು ನಿರ್ಧರಿಸಿದೆ. ಮೂರು ದಿನ ಸಾಮಾನ್ಯ ರಜೆ ಹಾಗೂ ಎರಡು ದಿನ ಮುಷ್ಕರ ಸೇರಿ ಒಟ್ಟು ಐದು ದಿನಗಳು ಬ್ಯಾಂಕ್‍ಗಳು ತೆರೆದಿರುವುದಿಲ್ಲ. ಈ ರಜಾ ಎಫೆಕ್ಟ್ ನಿಂದ ಎಟಿಎಂಗಳಲ್ಲಿ ನೋ ಕ್ಯಾಶ್ ಆಗುವ ಸಾಧ್ಯತೆಯಿದೆ.

ನಾಳೆಯಿಂದ ದೇಶದಾದ್ಯಂತ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ಎರಡು ದಿನ ಮುಷ್ಕರ ನಡೆಸುತ್ತಿವೆ. ಬ್ಯಾಂಕ್ ಸಿಬ್ಬಂದಿಗಳ ವೇತನ, ಪಿಂಚಣಿ ಸೇರಿದಂತೆ ಇತರೆ ಬೇಡಿಕೆಗೆ ಆಗ್ರಹಿಸಿ ಮುಷ್ಕರ ನಡೆಸುವುದಾಗಿ ಬ್ಯಾಂಕ್‍ಗಳು ಸೂಚಿಸಿದೆ. ಇನ್ನೂ 22, 23 ಹಾಗೂ 25 ರಂದು ಸಾಮಾನ್ಯ ರಜಾ ದಿನಗಳಾಗಿದ್ದು 21 ಹಾಗೂ 26 ರಂದು ಬ್ಯಾಂಕ್‍ಗಳು ಮುಷ್ಕರ ನಡೆಸಲಿವೆ ಎನ್ನಲಾಗಿದೆ.

ಐದು ದಿನ ಬ್ಯಾಂಕ್‍ಗಳಿಗೆ ರಜೆ ಇರುವುದರಿಂದ ಯಾದಗಿರಿ ಜಿಲ್ಲೆಯ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬ್ಯಾಂಕ್ ಗಳು ಮುಷ್ಕರ ನಡೆಸುವ ಸಾಧ್ಯತೆ ಹಿನ್ನೆಲೆ ಜಿಲ್ಲೆಯ ಸಿಂಡಿಕೇಟ್ ಬ್ಯಾಂಕ್, ಎಸ್.ಬಿ.ಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳ ಮುಂದೆ ರೈತರ ಕ್ಯೂ ಹೆಚ್ಚಾಗಿದೆ. ಬ್ಯಾಂಕ್ ಹೊರಗಡೆ ಬಿಸಿಲನ್ನು ಲೆಕ್ಕಿಸದೆ ರಸ್ತೆ ಉದ್ದಕ್ಕೂ ನಿಂತು ಸಾಲಮನ್ನಾ ಯೋಜನೆಗೆ ದಾಖಲಾತಿ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 94 ಸಾವಿರ ರೈತರು ಸಾಲಮನ್ನಾ ಯೋಜನೆಯ ಲಾಭ ಪಡೆಯಲಿದ್ದು. ಜನವರಿ 10 ವರೆಗೆ ರೈತರು ಸಾಲ ಪಡೆದ ಬ್ಯಾಂಕ್ ಗಳಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಮತ್ತು ಜಮೀನು ಫಹಣಿ ಸೇರಿದಂತೆ ಇತರ ದಾಖಲೆ ಸಲ್ಲಿಸಲು ಸರ್ಕಾರ ಸೂಚಿಸಿದೆ. ಈಗಾಗಲೇ ಶೇಕಡಾ 40ರಷ್ಟು ರೈತರು ದಾಖಲಾತಿ ಸಲ್ಲಿಸಿದ್ದಾರೆ. ಇನ್ನೂ 60 ರಷ್ಟು ರೈತರು ದಾಖಲಾತಿ ಸಲ್ಲಿಸಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳು ಸಾಲು ಸಾಲು ರಜೆ ಇದ್ದರೆ, ರೈತರು ಸಾಲಮನ್ನಾ ಯೋಜನೆಯಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಬ್ಯಾಂಕ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಶನಿವಾರ, ಭಾನುವಾರ ಹಾಗೂ ಮಂಗಳವಾರ ಸಾಮಾನ್ಯ ರಜಾ ದಿನವಾಗಿದ್ದರೆ, ಇಂದು ಮತ್ತು ಬುಧವಾರ ಬ್ಯಾಂಕ್ ಮುಷ್ಕರ ಇದೆ ಎನ್ನಲಾಗಿದೆ. ಬ್ಯಾಂಕ್ ಮುಷ್ಕರದಿಂದ ಒಂದು ಕಡೆ ಎಟಿಎಂ ನಲ್ಲಿ ನಗದು ಸಿಗಲ್ಲ, ಇನ್ನೊಂದು ಕಡೆ ದಾಖಲಾತಿ ಸಲ್ಲಿಸಲು ರೈತರಿಗೆ ತೊಂದರೆ ಆಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳು ಮುಷ್ಕರ ಮಾಡುವುದರಿಂದ ಸಾಕಷ್ಟು ಜನರಿಗೆ ತೊಂದರೆ ಆಗುವುದಂತು ಸುಳ್ಳಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *