ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್ ವಾರ್ಡ್ ಗೆ ಶಿಫ್ಟ್

Public TV
1 Min Read

– ಆಸ್ಪತ್ರೆಗೆ ಯಾರೂ ಬರಬೇಡಿ ಕಿರಿಯ ಶ್ರೀ ಮನವಿ

ಚೆನ್ನೈ: ಇಲ್ಲಿನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದ್ದು, ಇಂದು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

ವೈದ್ಯ ಡಾ.ಪರಮೇಶ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ. ಬುಧವಾರ ರಾತ್ರಿಯಿಂದ ಇಡ್ಲಿ ಹಾಗೂ ಬೇಯಿಸಿದ ಬೆಳೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಿರಿಯ ಶ್ರೀಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಗಳನ್ನ ಭೇಟಿ ಮಾಡಲು 4 ದಿನಗಳು ಅವಕಾಶವಿಲ್ಲ. ಏಕೆಂದರೆ ಶ್ರೀಗಳನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಐಸಿಯೂನಲ್ಲಿ ಇದ್ದಂತೆ ವಾರ್ಡ್ ನಲ್ಲಿಯೂ ಎಚ್ಚರಿಕೆ ನೀಡಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಶ್ರೀಗಳನ್ನು ನೋಡಲು ಯಾರೂ ಬರಬೇಡಿ. ಮತ್ತೊಮ್ಮೆ ಶ್ರೀಗಳಿಗೆ ಸೋಂಕಾದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ ಭಕ್ತರು ಶ್ರೀಗಳನ್ನು ಮಠದಲ್ಲೇ ನೋಡಬಹುದು. ಶ್ರೀಗಳನ್ನು ನೋಡಲು ಬರೋರ ಸಂಖ್ಯೆ ಹೆಚ್ಚಾದರೆ ಅಕ್ಕಪಕ್ಕದ ರೋಗಿಗಳಿಗೂ ತೊಂದರೆಯಾಗುತ್ತೆ. ಹೀಗಾಗಿ ಯಾರೂ ಬರಬೇಡಿ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.

ವೈದ್ಯರೊಂದಿಗೆ ಚರ್ಚೆ ನಡೆಸಿ ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಶ್ರೀಗಳ ಆರೋಗ್ಯ ಚೇತರಿಕೆ ಬಗ್ಗೆ ಭಕ್ತರು ದೇವರಲ್ಲಿ ಮನವಿ ಮಾಡಿಕೊಳ್ಳಿ. ಶೀಘ್ರವೇ ದರ್ಶನಕ್ಕೆ ಅವಕಾಶ ಲಭಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಡಿ.08 ರಂದು ಪಿತ್ತಕೋಶ ಸೋಂಕಿನ ಆಪರೇಷನ್‍ಗೆ ಸಿದ್ದಗಂಗಾ ಶ್ರೀಗಳು ಒಳಗಾಗಿದ್ದರು. ಬಳಿಕ ಅವರಿಗೆ ಐಸಿಯೂನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಮಂಗಳವಾರದಿಂದ ಶ್ರೀಗಳಿಗೆ ದ್ರವರೂಪದ ಆಹಾರ ನೀಡಲಾಗಿತ್ತು. ಸದ್ಯ ಶ್ರೀಗಳು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಆದರೆ ವಾಕಿಂಗ್ ಮಾಡುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *