ಚಿತ್ರದುರ್ಗ: ಪ್ರೇಮಿಗಳಿಬ್ಬರ ಜಾತಿಯೂ ಒಂದೇ ವರಸೆಯಲ್ಲಿ ಸಂಬಂಧಿಕರೇ ಆಗಿದ್ದು, ಅವರ ಪೋಷಕರು ವಯಸ್ಸಿನ ಅಂತರದ ನೆಪವೊಡ್ಡಿ ಆ ಜೋಡಿಗೆ ವಿಲನ್ ಆಗಿದ್ದಾರೆ. ಮದುವೆ ಆಗಿ ಗರ್ಭಿಣಿ ಆಗಿದ್ದರೂ ಸಹ ಪೋಷಕರು ಪ್ರಾಣ ಬೆದರಿಕೆವೊಡ್ಡಿ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಲಲಿತಾ ಹಾಗೂ ದಾವಣಗೆರೆ ನಗರದ ಪ್ರತಾಪ್ ಸಂಬಂಧಿಕರಾಗಿದ್ದು, 3 ವರ್ಷಗಳಿಂದ ಇಬ್ಬರ ನಡುವೆ ಪ್ರೇಮಾಂಕುರ ಆಗಿದೆ. ಆದರೆ ಪ್ರೀತಿಸಿದ ಜೋಡಿಗೆ ಪ್ರತಾಪ್ ಪೋಷಕರೇ ವಿಲನ್ ಆಗಿದ್ದಾರೆ. ಪ್ರತಾಪ್‍ಗಿಂತ ಲಲಿತಾಗೆ ಹೆಚ್ಚು ವಯಸ್ಸಾಗಿದೆ ಎಂಬ ನೆಪವೊಡ್ಡಿ ಪ್ರೇಮವಿವಾಹವನ್ನು ವಿರೋಧಿಸಿದ್ದಾರೆ.
ಪೋಷಕರ ವಿರೋಧದ ನಡುವೆ ಇಬ್ಬರು ಆರು ತಿಂಗಳ ಹಿಂದೆಯೇ ಚಿತ್ರದುರ್ಗದ ಕಣಿವೆ ಮಾರಮ್ಮ ದೇಗುಲದಲ್ಲಿ ಮದುವೆ ಆಗಿದ್ದು, ನಗರಂಗೆರೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಲಲಿತಾ ಗರ್ಭಿಣಿ ಆಗಿದ್ದರೂ ಸಹ ಪ್ರತಾಪ್‍ನ ಪೋಷಕರು ಲಲಿತಾ ಹಾಗೂ ಕುಟುಂಬಕ್ಕೆ ಕಿರಕುಳ ನೀಡುತ್ತಿದ್ದು, ರಿಜಿಸ್ಟರ್ ಮದುವೆ ಆಗಲು ಸಹ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪ್ರತಾಪ್ ಆರೋಪಿಸಿದ್ದಾರೆ.
ಈಗಾಗಲೇ ಗರ್ಭಿಣಿ ಆಗಿರುವ ಲಲಿತಾ, ಪತಿಯ ಜೊತೆ ನೆಮ್ಮದಿಯ ಬದುಕು ನಡೆಸಲು ಪ್ರತಾಪ್‍ನ ತಂದೆ ಹನುಮಂತಪ್ಪ ಮತ್ತು ಅವರ ಕುಟುಂಬ ಬಿಡುತ್ತಿಲ್ಲ. ನಮ್ಮ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಹೀಗಾಗಿ, ನಿತ್ಯ ಭಯ ಭೀತಿಯ ನಡುವೆ ಬದುಕು ನಡೆಸುವಂತಾಗಿದ್ದು ಪೊಲೀಸರು ರಕ್ಷಣೆ ಕೊಡಬೇಕು ಎಂದು ಲಲಿತಾ ಮನವಿ ಮಾಡಿಕೊಂಡಿದ್ದಾರೆ.
ಈ ನವಜೋಡಿಯೂ ಚಿತ್ರದುರ್ಗದ ಎಸ್‍ಪಿ ಅರುಣ್ ಅವರಿಗೆ ಈ ಸಂಬಂಧ ದೂರು ನೀಡಿದೆ. ದೂರು ಸ್ವೀಕರಿಸಿರುವ ಎಸ್‍ಪಿ ಅರುಣ್ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv