ಕೆಲವೇ ವರ್ಷಗಳಲ್ಲಿ ಮಾಜಿ ಪ್ರಧಾನಿ ಬಹುದಿನದ ಕನಸು ಸಾಕಾರ..!

Public TV
2 Min Read

ಹಾಸನ: ರಾಜ್ಯದಲ್ಲಿ ಮಂಗಳೂರು, ಮೈಸೂರು ಬಳಿಕ ಇದೀಗ ಹಾಸನದಲ್ಲೂ ವಿಮಾನ ನಿಲ್ದಾಣ ತಲೆ ಎತ್ತಲಿದೆ. ಮಾಜಿ ಪ್ರಧಾನಿ ದೇವೇಗೌಡರ ಬಹುದಿನದ ಕನಸು ಕೆಲ ವರ್ಷಗಳಲ್ಲೇ ಸಾಕಾರಗೊಳ್ಳಲಿದೆ.

2007ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ರು. ಆಗ ಯೋಜನೆಗೆ ಬೇಕಾದ ಒಟ್ಟು ಜಮೀನು ಪೈಕಿ 536 ಎಕರೆಯನ್ನು ಸ್ವಾದೀನ ಮಾಡಲಾಗಿತ್ತು. ಅದೆಲ್ಲ ಈಗ ಪಾಳು ಬಿದ್ದಿದೆ. ಹೆಚ್ಚುವರಿಯಾಗಿ ಬೇಕಿದ್ದ 189 ಎಕರೆ ಜಮೀನು ಸ್ವಾದೀನ ವಿಚಾರದಲ್ಲಿ ಸರ್ಕಾರ ಮತ್ತು ರೈತರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿತ್ತು.

ಸದ್ಯ ಸಂಧಾನ ಬಳಿಕ ಹಾಸನದ ಭೂವನಹಳ್ಳಿ, ಸಂಕೇನಹಳ್ಳಿ, ಲಕ್ಷ್ಮಿಸಾಗರ, ತೆಂಡಹಳ್ಳಿ, ಮೈನಹಳ್ಳಿ, ದ್ಯಾವಲಾಪುರ ಮತ್ತು ಚಟ್ನಹಳ್ಳಿಯ ಸುಮಾರು 300 ರೈತರು ಭೂಮಿ ನೀಡುವುದಾಗಿ ಜಿಲ್ಲಾಡಳಿತಕ್ಕೆ ಒಪ್ಪಿಗೆ ಪತ್ರ ನೀಡಿದ್ದಾರೆ. ಇದ್ರಿಂದ ಕಮರಿ ಹೋಗಿದ್ದ ವಿಮಾನ ನಿಲ್ದಾಣ ನಿರ್ಮಾಣದ ಕನಸು ಮತ್ತೆ ಚಿಗುರಿದೆ.

ರೈತರ ಈ ನಡೆಯಿಂದಾಗಿ ಏರ್ ಪೋರ್ಟ್ ಗೆ ಇದ್ದ ದೊಡ್ಡ ವಿಘ್ನ ನಿವಾರಣೆಯಾದಂತಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳಿಗೆ ಒಪ್ಪಿಗೆ ಪತ್ರ ನೀಡಿದ ನಂತರ ಮಾತನಾಡಿದ ರೈತರು, ಉದ್ದೇಶಿತ ವಿಮಾನ ನಿಲ್ದಾಣ ಎಂದೋ ಆಗಬೇಕಿತ್ತು. ಆದರೆ ಹಲವು ಕಾರಣದಿಂದ ವಿಳಂಬವಾಗಿತ್ತು. ಇದೀಗ ಹೆಚ್ಚುವರಿಯಾಗಿ 189 ಎಕರೆ ಭೂಮಿಯನ್ನು ಸಂತೋಷದಿಂದ ಸರ್ಕಾರಕ್ಕೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿದ್ದೇವೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದ್ರೆ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಸ್ವಾದೀನಕ್ಕೆ ಒಪ್ಪಿದ್ದೇವೆ. ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭವಾಗಿ ಮುಗಿಯುವ ನಿರೀಕ್ಷೆಯಿದೆ. ಸುಮಾರು 300 ಜನ ರೈತರು ಒಪ್ಪಿಗೆ ಪತ್ರ ಸಹಿ ಮಾಡಿದ್ದೇವೆ. ಇದಕ್ಕೆ ಯಾವೊಬ್ಬ ರೈತರದ್ದೂ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಹಿತದೃಷ್ಟಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಉಸ್ತುವಾರಿ ಸಚಿವರ ಪೂರಕ ಭರವಸೆ ಮೇರೆಗೆ ಭೂಮಿ ಕೊಡುವ ನಿರ್ಧಾರಕ್ಕೆ ಬಂದಿದ್ದೇವೆ. ಭೂಮಿಗೆ ಉತ್ತಮ ದರ ಸಿಗುವ ವಿಶ್ವಾಸವಿದೆ. ಸಚಿವ ರೇವಣ್ಣ ಅವರು ಮಾತ್ರವಲ್ಲದೆ, ನನ್ನ ಕನಸಿನ ಆಸೆ ಈಡೇರಲು ನೀವೆಲ್ಲರೂ ಸಹಕಾರ ಕೊಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮನವಿ ಮಾಡಿದರು. ಅದಕ್ಕಾಗಿ ಭೂಮಿ ನೀಡಿದ್ದೇವೆ ಎಂದು ಭೂ ಮಾಲೀಕ ಬಿ.ಆರ್.ತುಳಸೀರಾಂ ಹೇಳಿದ್ದಾರೆ.

ಒಟ್ಟಿನಲ್ಲಿ ಹಾಸನ ಏರ್ ಪೋರ್ಟ್ ಗೆ ಇದ್ದ ಭೂಕಂಠಕ ಇದೀಗ ಇತ್ಯರ್ಥವಾಗಿದೆ. ಜಿಲ್ಲೆ ಬಹುನಿರೀಕ್ಷಿತ ಕಾಮಗಾರಿ ಯಾವಾಗ ಆರಂಭವಾಗುತ್ತೆ ಎಂದು ಎದುರು ನೋಡುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗಿ ಹಾಸನದಲ್ಲಿ ವಿಮಾನ ಹಾರಾಡಲಿ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬೆಳೆಯಲಿ ಅಂತ ರೈತರು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *