ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ: ಮಾಜಿ ಜೆಡಿಎಸ್ ಶಾಸಕನಿಗೆ ಜೀವಬೆದರಿಕೆ

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ರಾಜಣ್ಣ ಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾನೆ.

ಮಾಜಿ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ನಿಂದನೆ ಮಾಡಿದ್ದಾನೆ. ಕಾಂಗ್ರೆಸ್ ಪಕ್ಷದವರಿಂದ ಹಣ ತಿಂದು ಜೆಡಿಎಸ್ ಪಕ್ಷವನ್ನ ಹಾಳು ಮಾಡಿಬಿಟ್ಟೆ ಎಂದು ಏಕ ವಚನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ತನ್ನ ಹೆಸರಾಗಲಿ, ಊರಾಗಲಿ ಹೇಳದ ಆ ವ್ಯಕ್ತಿ ಒಂದೇ ನಂಬರಿನಿಂದ ನಾಲ್ಕೈದು ಬಾರಿ ಕರೆ ಮಾಡಿದ್ದು ನಾನು ನಿನಗೆ ಮತ ನೀಡಿದ ಮತದಾರ ಎಂದು ಹೇಳಿಕೊಂಡಿದ್ದಾನೆ.

ನವೆಂಬರ್ 2 ರಂದು ಮೊದಲ ಬಾರಿಗೆ ಕರೆ ಮಾಡಿ ನಿಂದಿಸಿದ್ದ ವ್ಯಕ್ತಿ ಮತ್ತೆ ನವಂಬರ್ 3 ರಂದು ಮತ್ತೆ ಕರೆ ಮಾಡಿದ್ದಾನೆ. ಅಲ್ಲದೇ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೆಚ್ಚೆಂದರೆ ನೀನು ನನ್ನನ್ನು ಜೈಲಿಗೆ ಕಳುಹಿಸುತ್ತೀಯಾ ಅಷ್ಟೆ ತಾನೇ ಎಂದು ಹೇಳಿದ್ದಾನೆ.

ಮಾಜಿ ಶಾಸಕ ಎಂ.ರಾಜಣ್ಣ ಎಸ್ಪಿ ಕಾರ್ತಿಕ್‍ರೆಡ್ಡಿ ಅವರನ್ನು ಭೇಟಿ ಮಾಡಿ ಅನಾಮಧೇಯ ಮೊಬೈಲ್ ಕರೆಯ ಆಡಿಯೋ ರೆಕಾರ್ಡ್ ನೀಡಿದ್ದು, ಎಸ್ಪಿ ಕಾರ್ತಿಕ್‍ರೆಡ್ಡಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎಂ ರಾಜಣ್ಣ ಮೂರು ತಿಂಗಳ ಹಿಂದೆ ಶ್ರೀಕೃಷ್ಣ ಜಯಂತಿಯಂದು ನಡೆದ ಶ್ರೀಕೃಷ್ಣನ ಉತ್ಸವದಲ್ಲಿ ತಮಟೆ ಏಟಿಗೆ ಕುಣಿದಾಗಲೂ ಸಹ ನನಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಬೈದಿದ್ದ. ಆಗ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಅದೇ ರೀತಿ ಬೆದರಿಕೆ ಕರೆ ಮಾಡುತ್ತಿದ್ದು, ಈಗಾಲಾದರೂ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=Q5Zga39IWNI

Share This Article
Leave a Comment

Leave a Reply

Your email address will not be published. Required fields are marked *