ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?

Public TV
2 Min Read

ಬಳ್ಳಾರಿ: ಎರಡೂ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮರೆಯಾಗಿ ಬಿಜೆಪಿ ನಾಯಕ ಶ್ರೀರಾಮುಲು ಮತ್ತು ಕಾಂಗ್ರೆಸ್ ದಂಡಿನ ಡಿಕೆಶಿ ನಡುವಿನ ಮಹಾ ಭಾರತವಾಗಿ ಮಾರ್ಪಟ್ಟ ಬಳ್ಳಾರಿ ಉಪಚುನಾವಣೆಯಿದು. ಜೆ ಶಾಂತಾ ಮತ್ತು ಉಗ್ರಪ್ಪ ಎಂಬ ಇಬ್ಬರು ಸ್ಪರ್ಧಿಗಳು ನೆಪಮಾತ್ರವಾಗಿ, ಒಂದು ಕಾಲದಲ್ಲಿ ಗಣಿಧಣಿಗಳ ಕೋಟೆಗೆ ಪಾದಯಾತ್ರೆ ಮೂಲಕ ದಂಡಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ ಸೇನೆ ಮತ್ತು ರಾಮುಲು ಹಾಗೂ ಜನಾರ್ದನ ರೆಡ್ಡಿಯೆಂಬ ಕುಚುಕು ದೋಸ್ತ್‍ಗಳ ಜೋಡಿಯ ನಡುವಿನ ರಣಾಂಗಣವಾಗಿ ಮಾರ್ಪಟ್ಟ ಕದನವಿದು.

ಯಾರು ನಿಜವಾದ ಕನ್ನಡಿಗರು, ಯಾರು ಮೂಲ ಬಳ್ಳಾರಿಯವರು, ವಾಲ್ಮೀಕಿ ಸಮುದಾಯಕ್ಕೆ ಸಿದ್ದರಾಮಯ್ಯರಿಂದ ಅವಮಾನ, ಸಿದ್ದರಾಮಯ್ಯ ಮಗನ ಸಾವನ್ನ ಸಂಭ್ರಮಿಸಿ ರೆಡ್ಡಿ ಕೊಟ್ಟ ಶ್ರವಣಕುಮಾರನ ಉದಾಹರಣೆ, ರೆಡ್ಡಿಗಳ ವಿರುದ್ಧ ಗಣಿ ಲೂಟಿ ಆರೋಪ, ಸಂಸತ್ತಿಗೆ ಯಾರು ಕಾಲಿಟ್ಟರೆ ಬಳ್ಳಾರಿ ಜನ ಬಾಳು ಬಂಗಾರ ಆಗುತ್ತೆ ಅನ್ನೋ ವಾಗ್ವಾದಗಳ ಹೊಳೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲೋರು ಯಾರು ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

ಬಳ್ಳಾರಿಯಲ್ಲಿ ಯಾರ ನಡುವೆ ಪೈಪೋಟಿ?
– ಬಿಜೆಪಿಯಿಂದ ಜೆ.ಶಾಂತಾ
– ಕಾಂಗ್ರೆಸ್-ಜೆಡಿಎಸ್ ಕೂಟದಿಂದ ವಿ ಎಸ್ ಉಗ್ರಪ್ಪ

ಬಳ್ಳಾರಿ ಚಿತ್ರಣ:
ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,13,354 ಮತದಾರರಿದ್ದು, ಇದರಲ್ಲಿ ಪುರುಷರು 8,55,194 ಹಾಗೂ ಮಹಿಳೆಯರು 8,57,944 ಆಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ವಾಲ್ಮೀಕಿ (ನಾಯಕ) 3 ಲಕ್ಷ, ಲಿಂಗಾಯತ 3 ಲಕ್ಷ, ಎಸ್‍ಸಿ (ಲಂಬಾಣಿ) 2.5 ಲಕ್ಷ, ಕುರುಬ 2.5 ಲಕ್ಷ, ಮುಸ್ಲಿಂ 2 ಲಕ್ಷ, ಗೊಲ್ಲ 1 ಲಕ್ಷ, ಗಂಗಾಮತ 70 ಸಾವಿರ, ಬಲಿಜ 70 ಸಾವಿರ, ರೆಡ್ಡಿ-ಕಮ್ಮ 40 ಸಾವಿರ ಹಾಗೂ ಉಪ್ಪಾರ ಸಮುದಾಯದ 35 ಸಾವಿರ ಮತದಾರರಿದ್ದಾರೆ. ಇದರಲ್ಲಿ ವಾಲ್ಮೀಕಿ, ಲಿಂಗಾಯಿತ, ಲಂಬಾಣಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಮತಗಳು

ಸದ್ಯದ ಬಳ್ಳಾರಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ರಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ರೆಡ್ಡಿ, ಶ್ರೀರಾಮುಲು ಹಾಗೂ ಡಿಕೆಶಿವಕುಮಾರ್, ಸಿಎಂ ಕುಮಾರಸ್ವಾಮಿ ನಡುವೆ ನೇರ ಹಣಾಹಣಿಯಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗಿತ್ತು?
ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು 5,34,406 ಮತಗಳನ್ನು ಪಡೆದು, 85,144 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಕಾಂಗ್ರೆಸ್ಸಿನ ಎನ್.ವೈ.ಹನುಮಂತಪ್ಪ 4,49,262 ಮತಗಳನ್ನು ಪಡೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *