Exclusive: ಸಾಲ ನೋಟಿಸ್ ಪಡೆದ ರೈತರಿಗೆ ಪಬ್ಲಿಕ್ ಟಿವಿ ಮೂಲಕ ಎಚ್‍ಡಿಕೆ ಅಭಯ

Public TV
2 Min Read

ಬೆಂಗಳೂರು: ರೈತರ ಸಾಲಮನ್ನಾ ಘೋಷಣೆಯಾಗಿದ್ದರೂ ಬ್ಯಾಂಕ್ ಗಳು ರೈತರಿಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ರೈತರಿಗೆ ಅಭಯ ನೀಡಿದ್ದಾರೆ.

ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿ ರೈತರ ಸಮಸ್ಯೆಯನ್ನು ಸಿಎಂ ಕುಮಾರ ಸ್ವಾಮಿ ಅವರ ಗಮನಕ್ಕೆ ತಂದಿತ್ತು. ಸದ್ಯ ಈ ವರದಿಗೆ ಎಚ್ಚೆತ್ತ ಸಿಎಂ ಅವರು ರೈತರ ನೆರವಿಗೆ ಧಾವಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ರೈತರಿಗೆ ಸಮಸ್ಯೆ ಆಗದಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತಿದೆ. ಪ್ರಕರಣದಲ್ಲಿ ನೋಟಿಸ್ ನೀಡಿದ ಬ್ಯಾಂಕ್ ಗಳಿಗೆ ರೈತರು ಚೆಕ್ ನೀಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರು ಕ್ರಮಕ್ಕೆ ಮುಂದಾಗಿದ್ದಾರೆ. ರೈತರು ಟ್ರ್ಯಾಕ್ಟರ್ ಗಳಿಗೆ ಸಾಲ ಮಾಡಿದ್ದು, ಬ್ಯಾಂಕ್ ಸಿಬ್ಬಂದಿ ಕೋಲ್ಕತ್ತಾ ಮೂಲದವರಾಗಿದ್ದು ಆದ್ದರಿಂದ ಅಲ್ಲಿಂದ ನೋಟಿಸ್ ಬಂದಿದೆ ಎಂದು ಸ್ಪಷ್ಟನೆ ನೀಡಿದರು.

ಸದ್ಯ 23 ಲಕ್ಷ ರೈತರ ಮಾಹಿತಿಯನ್ನು ಬ್ಯಾಂಕ್ ಗಳಿಂದ ಪಡೆದಿದ್ದೇವೆ. ಬೆಳಗಾವಿ ಡಿಸಿ ಅವರಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ಆದರೆ ರೈತರು ಬ್ಯಾಂಕ್ ನೀಡಿದ ನೋಟಿಸ್‍ಗೆ ಪ್ರತಿಕ್ರಿಯೆ ನೀಡದ ಕಾರಣ ಬಂಧನದ ವಾರೆಂಟ್ ನೀಡಿದ್ದಾರೆ. ಸದ್ಯ ಬ್ಯಾಂಕ್ ಸಿಬ್ಬಂದಿ ಜೊತೆ ಮಾತುಕತೆ ನಡೆದಿದ್ದು ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆ ನೀಡಿದರು.

ರೈತ ಸಮಾವೇಶ:
ಇದೇ ತಿಂಗಳಲ್ಲಿ ಸರ್ಕಾರ ವತಿಯಿಂದ ರೈತ ಸಮಾವೇಶ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ವೇಳೆ ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡಲಾಗುವುದು. ಅಲ್ಲದೇ ಸದ್ಯ ಬೆಳೆ ಸಾಲಮನ್ನಾ ಮಾಡಲಾಗಿದ್ದು, 2006 ರಲ್ಲಿ ನಾನೇ ಸಾಲಮನ್ನಾ ಮಾಡಿದ್ದೇನೆ. ಬಳಿಕ ಯುಪಿಎ ಸರ್ಕಾರ ಸಾಲಮನ್ನಾ ಮಾಡಿತ್ತು. 2009ರಿಂದ ಮಾಡಿದ ಬೆಳೆಸಾಲ ಪಡೆದ ರೈತರ ಸಾಲಮನ್ನಾ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಐಎಎಸ್ ಅಧಿಕಾರಿ ನೇತೃತ್ವದ ಸಮಿತಿ ರಚಿಸಿ ಮಾಹಿತಿ ಪಡೆಯಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನ.7ರಂದು ಡಿಸಿಗಳ ಸಭೆ ಇದೆ. ಅದ್ದರಿಂದ ಈ ಕುರಿತು ಮತ್ತಷ್ಟು ಸೂಚನೆ ನೀಡಲಾಗುವುದು. ಅಲ್ಲದೇ ಬ್ಯಾಂಕ್ ನೋಟಿಸ್ ನೀಡುವ ವೇಳೆ ಕರ್ನಾಟಕದಲ್ಲೇ ದೂರು ದಾಖಲಿಸಲು ಸೂಚನೆ ನೀಡಲಾಗುವುದು ಎಂದರು.

ಮಾಹಿತಿ ಸಂಗ್ರಹ ತಡ:
ಸರ್ಕಾರ ರೈತರ ಸಾಲಮನ್ನಾ ಮಾಡುವ ವೇಳೆ ಕೆಲ ರಾಷ್ಟ್ರೀಯ ಬ್ಯಾಂಕ್ ಗಳು ಸಹಕಾರ ನೀಡಲಿಲ್ಲ. ಆದರೆ ಬಳಿಕ ಸರ್ಕಾರ ದಿಟ್ಟ ತೀರ್ಮಾನ ಮಾಡಿ ಚರ್ಚೆ ನಡೆಸಿದ ಬಳಿಕ ಮಾಹಿತಿ ನೀಡಲು ಮುಂದಾಗಿದ್ದಾರೆ. ಎಲ್ಲವೂ ಅಂತಿಮ ಹಂತದಲ್ಲಿ ಇದ್ದು ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.

ಸರ್ಕಾರ ಸಾಲಮನ್ನಾ ಮಾಡುತ್ತಿರುವುದು ಕೇವಲ ಬೆಳೆಸಾಲಮನ್ನಾ ಅಷ್ಟೇ. ಆದರೆ ಸದ್ಯ ರೈತರು ಟ್ರ್ಯಾಕ್ಟರ್, ಚಿನ್ನ ಸೇರಿದಂತೆ ಇತರೆ ಮೂಲಗಳ ಮೇಲೆ ಸಾಲ ಮಾಡಿರುವ ಬಡ್ಡಿಮನ್ನಾ ಮಾಡಲು ಸಿದ್ಧರಿದ್ದು, ರೈತರು ಇಂತಹ ಹಂತದಲ್ಲಿ ಪೂರ್ಣಪ್ರಮಾಣದಲ್ಲಿ ಸಾಲ ಪಾವತಿ ಮಾಡಿ ಉಪಯೋಗ ಪಡೆದುಕೊಳ್ಳಬೇಕಿದೆ ಎಂದು ಮನವಿ ಮಾಡಿದರು. ಬೆಳಗಾವಿಯಲ್ಲಿ ನಡೆಯುವ ಬ್ಯಾಂಕ್ ಅಧಿಕಾರಿಗಳ ಸಭೆ ಇಡೀ ನಾಡಿಗೆ ಅನ್ವಯಿಸುತ್ತದೆ. ನಿಮ್ಮ ವಾಹಿನಿಯ ವರದಿ ಮೇಲೆಯೇ ನಾನು ಬಹುಬೇಗ ತಕ್ಷಣ ಕ್ರಮಕೈಗೊಂಡಿದ್ದೇನೆ. ನಾಡಿನ ಎಲ್ಲಾ ರೈತರು ಸಮಸ್ಯೆ ಉಂಟಾದರೆ ಜಿಲ್ಲಾಧಿಕಾರಿಗಳಿಗೆ ನೇರ ವರದಿ ಮಾಡಿ ಎಂದು ಸಲಹೆ ನೀಡಿದರು.

ನಾನು ರೈತರ ಸಾಲಮನ್ನಾ ಮಾಡಲು ನಾನು ಮೂರು, ನಾಲ್ಕು ವರ್ಷ ತೆಗೆದುಕೊಂಡಿಲ್ಲ. ಆದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಾಲಮನ್ನಾ ಯೋಜನೆ ಏನಾಗಿದೆ ನನಗೆ ಗೊತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ಮುಖಂಡರು ಉತ್ತರಿಸಲಿ ಎಂದು ಸಿಎಂ ಸವಾಲು ಎಸೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *