ಮತದಾರರನ್ನು ಪ್ರಚೋದಿಸುತ್ತಿದ್ದ ಕೈ, ಕಮಲದ ಕಾರ್ಯಕರ್ತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಡಿಸಿ, ಎಸ್ಪಿ

Public TV
2 Min Read

ಬಾಗಲಕೋಟೆ: ನಿರ್ಬಂಧಿತ ಪ್ರದೇಶದಲ್ಲಿ ಪಕ್ಷದ ಬಾವುಟ, ಶಾಲು ಹಿಡಿದು ಮತದಾರರಿಗೆ ಪ್ರಭಾವ ಬೀರುತ್ತಿದ್ದ ಕೈ-ಕಮಲ ಪಕ್ಷಗಳ ಕಾರ್ಯಕರ್ತರನ್ನ ಸ್ವತಃ ಡಿಸಿ ಮತ್ತು ಎಸ್ಪಿ ವಶಕ್ಕೆ ಪಡೆದಿದ್ದಾರೆ.

ಜಮಖಂಡಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿರುವ ಮತಗಟ್ಟೆ ಸಂಖ್ಯೆ 125 ಕ್ಕೆ ಡಿಸಿ ಕೆ.ಜಿ ಶಾಂತಾರಾಮ್ ಹಾಗೂ ಎಸ್ಪಿ ಸಿ.ಬಿ ರಿಷ್ಯಂತ್ ಮತಗಟ್ಟೆಗೆ ದಿಢೀರ್ ಭೇಟಿ ನೀಡಿದ್ದಾರೆ.

ಈ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತಕೇಂದ್ರದ ನೂರು ಮೀಟರ್ ಪ್ರದೇಶದ ಒಳಗಡೆ ರಾಜಕೀಯ ಪಕ್ಷಗಳ ಚಿಹ್ನೆ ಪ್ರದರ್ಶನ, ಪ್ರತ್ಯಕ್ಷವಾಗಿ ಚಿಹ್ನೆ ತೋರಿಸಿ ಮತಯಾಚನೆ ಮಾಡುತ್ತಿದ್ದರು. ವಿಷಯ ತಿಳಿದ ಎಸ್.ಪಿ ರಿಷ್ಯಂತ್ ಹಾಗೂ ಡಿಸಿ ಕೆ.ಜೆ ಶಾಂತಾರಾಮ್, ಮತಗಟ್ಟೆ ಬಳಿ ಪರಿಶೀಲನೆ ನಡೆಸಿ, ಎರಡೂ ಪಕ್ಷಗಳ ಇಬ್ಬರು ಆರೋಪಿ ಕಾರ್ಯಕರ್ತರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಜಮಖಂಡಿ ಪಿಎಸ್.ಐ ದಿನೇಶ್ ಜಾವಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀತಿಸಂಹಿತೆ ಉಲ್ಲಂಘಿಸಿದ ಮತ್ತಷ್ಟು ಆರೋಪಿಗಳ ಪತ್ತೆಗೆ ತನಿಖೆ ನಡೆಸಿದ್ದಾರೆ. ಅಲ್ಲದೇ ವಶಕ್ಕೆ ಪಡೆದ ಆರೋಪಿಗಳ ಮೇಲೆ ನೀತಿ ಸಂಹಿತೆ ಉಲ್ಲಂಘನೆಯಡಿ, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದೇ ಮತಗಟ್ಟೆಯಲ್ಲಿ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಮತದಾನ ಮಾಡಿದ್ದರು. ಆ ವೇಳೆ ಅವರೊಂದಿಗೆ ಬಂದಿದ್ದ ಬೆಂಬಲಿಗರು ಪಕ್ಷದ ಶಾಲು ಹಾಕಿದ್ದರು. ಆ ಕಾರಣಕ್ಕೆ ಅವರ ಮೇಲೂ ಪ್ರಕರಣ ದಾಖಲಿಸಲು ಚುನಾವಣಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದರು.

ಈ ಘಟನೆಯಿಂದಾಗಿ ಬಿಜೆಪಿ ನಾಯಕರು ಡಿಸಿ, ಎಸ್ಪಿ ವಿರುದ್ಧ ಜಮಖಂಡಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ಪ್ರಚಾರದ ಆರೋಪ ಹಿನ್ನೆಲೆಯಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿ ಕೆ.ಜಿ ಶಾಂತಾರಾಮ್ ಹಾಗೂ ಎಸ್ಪಿ ಸಿ.ಬಿ ರಿಷ್ಯಂತ್ ವಿರುದ್ಧ ಬಿಜೆಪಿ ಮುಖಂಡ ಉಮೇಶ್ ಮಹಾಬಳಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸಿ, ಎಸ್ಪಿ ಅವರು ಕಾಂಗ್ರೆಸ್ ಏಜಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದ ಶಾಂತ ರೀತಿಯಲ್ಲಿ ಮತದಾನ ನಡೆದಿದ್ದು, ಮತದಾರರಲ್ಲಿ ಭಯ ಹುಟ್ಟಿಸಿ, ಕಡಿಮೆ ಮತದಾನ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಡಿಮೆ ಮತದಾನವಾದಲ್ಲಿ ಕಾಂಗ್ರೆಸ್‍ಗೆ ಲಾಭ ಆಗುತ್ತೆ ಅಂತ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯ ಸಮಿತಿಗೂ ಮಾಹಿತಿ ನೀಡಿದ್ದು, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದಾರೆಂದು ಉಮೇಶ ಮಹಾಬಳಶೆಟ್ಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *