ಎಂ.ಟೆಕ್, ಬಿ.ಟೆಕ್ ವಿದ್ಯಾರ್ಥಿಗಳಿಗೆ 7ನೇ ತರಗತಿ ವಿದ್ಯಾರ್ಥಿಯಿಂದ ಪಾಠ!

Public TV
2 Min Read

– 2020ರ ವೇಳೆ ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡೋ ಗುರಿ

ಹೈದ್ರಾಬಾದ್: ಟ್ಯೂಷನ್ ಪಡೆಯುವ ವಯಸ್ಸಿನಲ್ಲಿಯೇ 11 ವರ್ಷದ ಬಾಲಕನೊಬ್ಬ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ.

ಹೌದು, ಹೈದ್ರಾಬಾದ್‍ನ ಬಾಲಕ ಮಹಮ್ಮದ್ ಹಸನ್ ಅಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಯಲ್ಲಿ ನೀಡಿದ, ಮನೆಗೆಲಸವನ್ನು ಸಂಜೆ 6ಗಂಟೆಗೆ ಪೂರ್ಣಗೊಳಿಸಿ, ಬಳಿಕ ಬಿ.ಟೆಕ್ ಹಾಗೂ ಎಂ.ಟೆಕ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾನೆ. ಬಾಲಕನ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಣ ಗಳಿಕೆಗಾಗಿ ಬೋಧನೆ ಮಾಡುತ್ತಿಲ್ಲ. ಹೊರತಾಗಿ 2020ರ ವೇಳೆ ತಾನು ಒಂದು ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎನ್ನುವ ಗುರಿಯನ್ನು ಅಲಿ ಹೊಂದಿದ್ದಾನೆ.

ನಾನು ಕಳೆದ ವರ್ಷದಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದೆ. ಬೆಳಗ್ಗೆ ಶಾಲೆಗೆ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳುತ್ತೇನೆ. ಆಟವಾಡಿ ಹಾಗೂ ನನ್ನ ವಿದ್ಯಾಭ್ಯಾಸ ಮುಗಿಸುತ್ತೇನೆ. 6 ಗಂಟೆಗೆ ತರಬೇತಿ ಶಾಲೆಗೆ ಹೋಗಿ ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತೇನೆ ಎಂದು ಮಹಮ್ಮದ್ ಹಸನ್ ಅಲಿ ತಿಳಿಸಿದ್ದಾರೆ.

ನಾನು ಇಂಟರ್ ನೆಟ್‍ನಲ್ಲಿ ಕೆಲವು ವಿಡಿಯೋ ನೋಡಿದ್ದೆ. ಅದರಲ್ಲಿ ನಮ್ಮ ದೇಶದ ಅನೇಕ ಎಂಜಿನಿಯರಿಂಗ್ ಪದವಿಧರರು ನಮ್ಮ ವೃತ್ತಿಗೆ ಹೊರತಾದ ಕೆಲಸ ಮಾಡುತ್ತಿದ್ದಾರೆ ಎನ್ನವ ಮಾಹಿತಿ ಸಿಕ್ಕಿತು. ಇಂತಹ ಪರಿಸ್ಥಿತಿಗೆ ಸಂವಹನದ ಕೊರತೆಯೇ ಪ್ರಮುಖ ಕಾರಣ ಅಂತಾ ನನಗೆ ಅರ್ಥವಾಯಿತು. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಆರಂಭಿಸಿದೆ ಎಂದು ಅಲಿ ಹೇಳಿಕೊಂಡಿದ್ದಾನೆ.

ನನ್ನ ಅಜ್ಜ ಶಿಕ್ಷಕರು, ತಂದೆ, ಚಿಕ್ಕಪ್ಪ, ಅತ್ತೆಯಂದಿರು ಶಿಕ್ಷಕರು. ಹೀಗಾಗಿ ಬೋಧನೆ ರಕ್ತಗತವಾಗಿಯೇ ನನಗೆ ಬಂದಿದೆ. ಕಲಿಸಲು ಹಾಗೂ ಕಲಿಯಲು ನನಗೆ ಯಾವುದೇ ಅಂಜಿಕೆಯಿಲ್ಲ ಎಂದು ಅಲಿ ತಿಳಿಸಿದ್ದಾನೆ.

ಕಳೆದ ತಿಂಗಳಿನಿಂದ ನಾನು ಅಲಿ ಬಳಿಗೆ ಸಿವಿಲ್ ಎಂಜಿನಿಯರಿಂಗ್ ಸಾಫ್ಟ್‍ವೇರ್ ಪಾಠ ಹೇಳಿಕೊಳ್ಳಲು ಬರುತ್ತಿರುವೆ. ಆತನು ನಮಗಿಂತ ಕಿರಿಯನಾಗಿದ್ದರೂ, ನಮ್ಮ ಮಟ್ಟಕ್ಕೆ ಇಳಿದು ವಿಷಯವನ್ನು ಸರಳಗೊಳಿಸಿ ಬೋಧನೆ ಮಾಡುತ್ತಾನೆ ಎಂದು ಎಂಜಿನಿಯರ್ ವಿದ್ಯಾರ್ಥಿನಿ ಜಿ.ಸುಷ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂ.ಟೆಕ್ ವಿದ್ಯಾರ್ಥಿನಿ ಸಾಯಿ ರೇವತಿ ಕೂಡ ಮಹಮ್ಮದ ಹಸನ್ ಅಲಿ ಬಳಿ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *