ಬಿಎಸ್‍ವೈ ರಾಜಕೀಯ ಜೀವನ ಕೊನೆಗಾಣಿಸಲು ದೇವೇಗೌಡರ ಮಾಸ್ಟರ್ ಪ್ಲಾನ್!

Public TV
2 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜಕೀಯ ಜೀವನ ಕೊನೆಗಾಣಿಸಲು ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. `ಮಧ್ಯಾಹ್ನ ಮೂರು ಗಂಟೆ’ ಎಂದು ಹುಸಿ ಬಾಂಬ್ ಹಾಕಿದ್ದ ಯಡಿಯೂರಪ್ಪನವರನ್ನು ಸೋಲಿಸಲು ಪುತ್ರ ಕುಮಾರಸ್ವಾಮಿ ಜೊತೆ ಸೇರಿಕೊಂಡೇ ಬಲೆ ರೆಡಿ ಮಾಡಿದ್ದಾರೆ.

ಏನಿದು ರಣತಂತ್ರ?
ಅಕ್ಟೋಬರ್ 30, 31 ಈ ಎರಡೂ ದಿನ ಶಿವಮೊಗ್ಗದಲ್ಲಿ ದೇವೇಗೌಡರು ಅಬ್ಬರದ ಪ್ರಚಾರ ಮಾಡಲಿದ್ದಾರೆ. ಆ ಎರಡೂ ದಿನ ಶಿವಮೊಗ್ಗದಲ್ಲಿ ಕುಮಾರಸ್ವಾಮಿ-ದೇವೇಗೌಡರು ಜಂಟಿ ಪ್ರಚಾರ ಮಾಡಲಿದ್ದು, ಹೇಗಾದ್ರೂ ಮಾಡಿ ಯಡಿಯೂರಪ್ಪ ಮಗ ರಾಘವೇಂದ್ರರನ್ನ ಸೋಲಿಸಲೇಬೇಕೆಂಬ ಪಣ ತೊಟ್ಟಿದ್ದಾರೆ. ಪುತ್ರ ರಾಘವೇಂದ್ರ ಸೋತರೇ ಯಡಿಯೂರಪ್ಪ ರಾಜಕೀಯ ಜೀವನ ಕೊನೆಯಾಗಲಿದೆ. ಅಲ್ಲದೇ ಸ್ವಕ್ಷೇತ್ರದಲ್ಲಿ ಪುತ್ರನನ್ನ ಗೆಲ್ಲಿಸಲಾಗದವರು ಎಂಬ ಟೀಕೆಗೆ ಬಿಎಸ್‍ವೈ ತುತ್ತಾಗುತ್ತಾರೆ. ಮೊದಲ ಗಟ್ಟಿ ಏಟು ಬಿದ್ದರೆ ಮುಂದೆ ಈ ವಿಚಾರ ಪಕ್ಷದ ಒಳಗಡೆ ಚರ್ಚೆಯಾಗಿ ಬಿಎಸ್‍ವೈ ರಾಜಕೀಯಕ್ಕೆ ಹೊಡೆತ ಬೀಳಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ರಾಮುಲು ಸಿಎಂ ಆಗ್ತಾರಾ?
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲೇ ತಂತ್ರಗಳು ಆರಂಭವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಈಗ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಶುರುವಾಗಿದೆ. ದಿಢೀರ್ ಆಗಿ ಸಿಎಂ ಕುರ್ಚಿಗೆ ರಾಮುಲು ಹೆಸರು ತಂದಿದ್ದು ಏಕೆ ಪ್ರಶ್ನೆ ಇದೀಗ ಎದ್ದಿದೆ. ವಿ.ಸೋಮಣ್ಣ ಅವರ ಈ ಹೇಳಿಕೆ ಉದ್ದೇಶಪೂರ್ವಕವೋ? ಮಾತಿನ ಭರದಲ್ಲಿ ಕೊಟ್ಟ ಹೇಳಿಕೆಯೇ ಎನ್ನುವ ಚರ್ಚೆಗಳು ಆರಂಭವಾಗಿದೆ. ಆ ಒಂದು ಹೇಳಿಕೆಯಿಂದ ಬಿಜೆಪಿಯಲ್ಲಿ ಇದೀಗ ಅಸಮಾಧಾನ ಭುಗಿಲೆದ್ದಿದ್ದು, ಈ ಮೂಲಕ ಸೋಮಣ್ಣ ಹೇಳಿಕೆ ಹಿಂದೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇದ್ದಾರಾ ಅನ್ನೋ ಅನುಮಾನವೂ ಪ್ರಶ್ನೆಯೂ ಎದ್ದಿದೆ.

ಬಿಎಸ್‍ವೈ ಪ್ಲಾನ್ ಏನು?
ಸೋಮಣ್ಣ ವಿರುದ್ಧ ಫುಲ್ ಗರಂ ಆಗಿರುವ ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಎಸ್‍ವೈ ಅವರೂ ತಂತ್ರ ಹೂಡಿದ್ದಾರೆ. ಒಂದು ವೇಳೆ ಶಿವಮೊಗ್ಗದಲ್ಲಿ ರಾಘವೇಂದ್ರ ಸೋತರೇ ರಾಮುಲುಗೆ ಅವಕಾಶ ನೀಡುವುದು. ಹೀಗಾಗಿಯೇ ಸೋಮಣ್ಣರಿಂದ `ರಾಮುಲು ಮುಂದಿನ ಸಿಎಂ’ ಮಂತ್ರ ಎನ್ನಲಾಗುತ್ತಿದೆ. ಆದ್ರೆ, ಉಪ ಚುನಾವಣೆಯ ಫಲಿತಾಂಶವನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಎಸ್‍ವೈ ಪ್ಲಾನ್ ಮಾಡಿದ್ದು, ಶಿವಮೊಗ್ಗದ ಜತೆಗೆ ಜಮಖಂಡಿ ವಿಧಾನಸಭೆ ಕ್ಷೇತ್ರ ಗೆಲ್ಲಲು ತಂತ್ರ ಹೂಡಿದ್ದಾರೆ. ಹೀಗಾಗಿ ಜಮಖಂಡಿಯಲ್ಲಿ ಇನ್ನೊಂದು ದಿನ ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ. ಜಮಖಂಡಿಯಲ್ಲಿ ಗೆದ್ದರೆ ಮೈತ್ರಿ ಸರ್ಕಾರವಿದ್ದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ವಿರುದ್ಧ ಜನಾಭಿಪ್ರಾಯ ಇದೆ ಎನ್ನುವ ನಮ್ಮ ಆರೋಪ ಈಗಲೇ ಉತ್ತರ ಸಿಕ್ಕಿದೆ ಎಂದು ಹೇಳಿ ಮತ್ತೆ ಸರ್ಕಾರ ರಚನೆಯ ಉದ್ದೇಶವನ್ನು ಬಿಎಸ್‍ವೈ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *