ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

Public TV
3 Min Read

– ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ: ವಿಲನ್ ನಿರ್ದೇಶಕ ಸವಾಲ್

ಬೆಂಗಳೂರು: `ದಿ ವಿಲನ್’ ಸಿನಿಮಾ ಯಶಸ್ವಿಯಾಗಿ ಮೂಡಿಬಂದಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್, ಕಮೆಂಟ್ ಪಡೆಯಲು ವಿಕೃತಕಾಮಿಗಳು ತಮ್ಮಗೆ ಇಷ್ಟ ಬಂದಂತೆ ಬರೆಯುತ್ತಾರೆ. ನಿಮಗೆ ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ದಿ ವಿಲನ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್, ಮಾಧ್ಯಮಗಳು ವಿಮರ್ಶೆ ಮಾಡಿ ನಮ್ಮ ಕಷ್ಟ, ಶ್ರಮವನ್ನು ತಿಳಿದು ಬಳಿಕ ನಮ್ಮ ತಪ್ಪುಗಳನ್ನು ತಿಳಿಸುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಅವರೇ ಹೀರೋ ಆಗಿ, ವಿಮರ್ಶೆ ಮಾಡುವ ಬದಲು ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಸಿನಿಮಾ ಮಾಡಲು ಬಹಳ ಇಷ್ಟ ಇದೆ. ಆದರೆ ಮಾತು ಮಾತಿಗೂ ರಾಜಮೌಳಿ, ಮುರುಗದಾಸ್ ಎನ್ನುತ್ತೀರಾ. ಕೆಲವರು ತೆಲುಗು, ತಮಿಳು ಜನರಿಗೆ ಹೋಲಿಕೆ ಮಾಡಿ ನೋಡುತ್ತೀರಾ. ಕನ್ನಡ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾನು ಏನು ಮಾಡಲು ಆಗುತ್ತೆ. ಏಕೆ ನಮ್ಮ ಕಷ್ಟ ನಿಮಗೇ ಕಾಣಿಸುವುದಿಲ್ಲವಾ ಎಂದು ಪ್ರಶ್ನೆ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಂದು ಕನ್ನಡ ಸಿನಿಮಾವನ್ನು ಬೇರೆ ರಂಗದಲ್ಲಿ ಗುರುತಿಸವಂತೆ ಮಾಡಲು ಹಗಲು, ರಾತ್ರಿ ನನ್ನಂತಹ ಹಲವರು ದಿನ ನಿತ್ಯ ಕುಟುಂಬ ಬಿಟ್ಟು ಶ್ರಮಿಸುತ್ತಿದ್ದಾರೆ. ನಾಡಿನಲ್ಲಿ ಒಬ್ಬ ರೈತ ಹೇಗೆ ಎಲ್ಲವನ್ನೂ ಶ್ರಮ ವಹಿಸಿ ಮಾಡುತ್ತಾರೋ ಹಾಗೆಯೇ ನಾನು ಕೂಡ ಶ್ರಮಿಸಿದ್ದೇನೆ. ಒಂದೊಮ್ಮೆ ಆ ವರ್ಷ ಬೆಳೆ ಬರಲಿಲ್ಲ ಎಂದರೆ ರೈತ ಮತ್ತೆ ಪ್ರಯತ್ನ ಮಾಡುತ್ತಾರೆ. ನಾನು ಅಷ್ಟೇ. ಆದರೆ ನನ್ನ ಕೆಲಸಕ್ಕೆ ಬೆಲೆ ನೀಡದೇ ಇದ್ದರೂ ಪರವಾಗಿಲ್ಲ. ಆದರೆ ವೈಯಕ್ತಿಕ ಟೀಕೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ಪ್ರೇಮ್ ಚಾಲೆಂಜ್
ನಿಮಗೇ ನನ್ನ ಸಿನಿಮಾ ಇಷ್ಟ ಆಗಿಲ್ಲ ಎಂದರೆ ವಿಮರ್ಶೆ ಮಾಡಿ. ಆದರೆ ಟೀಕೆ ಮಾಡುವ ಮೊದಲು ನಿಮ್ಮ ಹಣದಲ್ಲಿ ಒಂದು ಸಿನಿಮಾ ಮಾಡಲು ಕಥೆ ಸಿದ್ಧಪಡಿಸಿ, ನಾಯಕ ನಟರ ಪಡೆಯಿರಿ. ಬಳಿಕ ನನ್ನನ್ನು ಕೂಲಿ ಮಾಡುವ ವ್ಯಕ್ತಿಯಂತೆ ನಿರ್ದೇಶನ ಮಾಡಲು ಕರೆದು ನೋಡಿ ಬರುತ್ತೇನೆ. ಆಗ ಒಬ್ಬ ಕಲಾವಿದನ ಕಷ್ಟ ತಿಳಿಯುತ್ತದೆ. ಟೀಕೆ ಮಾಡುವವರು ಒಂದು ಸಿನಿಮಾ ಮಾಡಿ ಎಂದು ಸವಾಲು ಹಾಕುತ್ತಿದ್ದೇನೆ ಎಂದು ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಚಾಲೆಂಜ್ ನೀಡಿದರು.

ನಿಮಗೆ ನಟರ ಬಗ್ಗೆ ಅಷ್ಟು ಅಭಿಮಾನ ಇದ್ದರೆ ನಿಮಗೇ ಬೇಕಾದ ನಟ, ನಟಿ ಬಳಿ ಹೋಗಿ ಪ್ರೇಮ್ ಜೊತೆ ಸಿನಿಮಾ ಬೇಡ ಎಂದು ಹೇಳಿ. ಅವರ ನಿರ್ದೇಶನದಲ್ಲಿ ಮಾಡದಂತೆ ಹೇಳಿ. ನಾನು ಏನೂ ಹೇಳಲ್ಲ. ಏಕೆಂದರೆ ನಿಮ್ಮ ವೈಯಕ್ತಿಕ ಟೀಕೆಗಳು ನನಗೆ ಸಾಕಷ್ಟು ನೋವು ತಂದಿದೆ. ನನ್ನ ಬಳಿ ಸುಮಾರು 9 ವಿಡಿಯೋಗಳು ಇದೆ. ಅವುಗಳನ್ನು ನನ್ನ ವಕೀಲರ ಬಳಿ ನೀಡಿದ್ದೇನೆ. ವಿಡಿಯೋದಲ್ಲಿನ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡುತ್ತೇನೆ. ದಯಮಾಡಿ ಅದರಲ್ಲಿ ನಿಮ್ಮ ಮಕ್ಕಳಿದ್ದರೆ ನಮ್ಮನ್ನು ಕ್ಷಮಿಸಿ ಅಮ್ಮ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ. ನಿಮ್ಮ ಟೀಕೆ ನೋಡಿದರೆ ನೀವು ಕುಟುಂಬದಲ್ಲಿ ಬೆಳೆದು ಬಂದಿಲ್ಲ ಎಂದು ಹೇಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಕೃತ ಮನಸ್ಸುಗಳಿವೆ. ಅವುಗಳ ವಿರುದ್ಧ ನ್ಯಾಯಾಲಯಕ್ಕೆ ಬೇಕಾದರೂ ಹೋಗುತ್ತೇನೆ ಎಂದರು.

ವೈಯಕ್ತಿಕವಾಗಿ ಟೀಕೆ ಮಾಡಿದವರ ವಿರುದ್ಧ ನಾನು ಯುದ್ಧ ಸಾರುತ್ತೇನೆ. ಈ ಕುರಿತು ಫೇಸ್‍ಬುಕ್ ಪೇಜ್ ಆರಂಭಿಸುತ್ತೇನೆ. ಕನ್ನಡ ಯಾವುದೇ ಕಲಾವಿದನ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಬೇಡ ಎಂಬುವುದೇ ನನ್ನ ಮಾತಿನ ಉದ್ದೇಶ. ಯಾವುದೇ ನಿರ್ದೇಶಕ ಶೇ. 100ರಷ್ಟು ಎಲ್ಲರಿಗೂ ಒಪ್ಪಿಸಲು ಸಾಧ್ಯವಿಲ್ಲ. ಶೇ.80 ಜನ ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಉಳಿದ ಶೇ.20 ಮಂದಿ ಮಾತ್ರ ಹೀಗೆ ಇರುತ್ತಾರೆ. ಎಲ್ಲಾ ನಟರು ಒಪ್ಪಿಯೇ ಸಿನಿಮಾ ಮಾಡುತ್ತಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಪ್ಪಿಯೇ ಸಿನಿಮಾ ಮಾಡಿದ್ದಾರೆ. ಎಲ್ಲರೂ ಬೆಂಬಲ ನೀಡಿದ ಕಾರಣಕ್ಕೆ ಸಿನಿಮಾ ಆಗಿದೆ. ಈಗಲೂ ಶಿವರಾಜ್ ಕುಮಾರ್ ಅವರು ಒಂದು ಮಾತು ಹೇಳಿದರೆ ನಾನು ಆ ದೃಶ್ಯ ತೆಗೆಯಲು ಸಿದ್ಧ ಎಂದರು.

ಇದೇ ವೇಳೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ನಾಡಿನ ಜನರಿಗೆ ವಂದನೆ ತಿಳಿಸಲು ಸುದೀಪ್, ಶಿವಣ್ಣ ಅವರೊಂದಿಗೆ ನಾವು ಎಲ್ಲ ಕಡೆ ಹೋಗುತ್ತೇವೆ. ಈ ಕುರಿತು ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *