ನಗ್ನ ಚಿತ್ರಗಳ ಬೆದರಿಕೆಯೊಡ್ಡಿ ಮಾಜಿ ಸಹೋದ್ಯೋಗಿ ಮೇಲೆ ಬ್ಯಾಂಕ್ ಉದ್ಯೋಗಿ ಅತ್ಯಾಚಾರ

Public TV
1 Min Read

ಮುಂಬೈ: ಸೆಕ್ಸ್ ವಿಡಿಯೋ, ಬೆತ್ತಲೆ ಫೋಟೋಗಳ ಬೆದರಿಕೆಯೊಡ್ಡಿ ಮಾಜಿ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ್ದ ಬ್ಯಾಂಕ್ ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಲೋವರ್ ಪರೇಲ್ ನಿವಾಸಿ ವಿಲಾಸ್ ಕೃಷ್ಣ ಕದಂ (38) ಬಂಧಿತ ಆರೋಪಿ. ವಿಲಾಸ್ ಮೇಲೆ ಅತ್ಯಾಚಾರ, ಹಲ್ಲೆ, ಬೆದರಿಕೆ, ಉದ್ದೇಶಪೂರ್ವಕ ಅವಮಾನ ಆರೋಪದಡಿ ಪ್ರಕರಣ ದಾಖಲಾಗಿದೆ. ಜೊತೆಗೆ ಆತನ ಬಳಿ ಇದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?:
ಸಂತ್ರಸ್ತ ಮಹಿಳೆ ಹಾಗೂ ವಿಲಾಸ್ ಇಬ್ಬರು ಒಂದೇ ಬ್ಯಾಂಕ್‍ನಲ್ಲಿ 2008ರಿಂದ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಬೆಳೆದು 2013ರಿಂದ 2015ರ ವರೆಗೆ ದೈಹಿಕ ಸಂಬಂಧ ಹೊಂದಿದ್ದರು. ಆದರೆ 2017ರಲ್ಲಿ ಸಂತ್ರಸ್ತ ಮಹಿಳೆಯು ಬೇರೊಬ್ಬ ಯುವಕನನ್ನು ಮದುವೆಯಾಗಿದ್ದಾಳೆ.

ಮದುವೆಗೂ ಮುನ್ನ ವಿಲಾಸ್‍ನನ್ನು ಭೇಟಿಯಾಗಿ ನಮ್ಮ ಸಂಬಂಧವನ್ನು ನಿಲ್ಲಿಸುವಂತೆ ತಿಳಿಸಿದ್ದೆ. ಆದರೆ ಅವನು ಅದಕ್ಕೆ ಒಪ್ಪಲಿಲ್ಲ. ಕೊನೆಯದಾಗಿ ನಿನ್ನ ಜೊತೆಗೆ ಮಾತನಾಡಬೇಕು ದಾದರ್ ಸಮೀಪದ ಸೇನಾ ಭವನಕ್ಕೆ ಬಾ ಎಂದು 2017ರಲ್ಲಿ ಕರೆದಿದ್ದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾಳೆ.

ಮದುವೆಯ ನಂತರವೂ ಫೋನ್ ಮಾಡಿ, ಕರೆಯುತ್ತಿದ್ದ. ಇದನ್ನು ನಿರಾಕರಿಸಿದರೆ, ನಮ್ಮಿಬ್ಬರ ಅಕ್ರಮ ಸಂಬಂಧದ ಕುರಿತು ನಿನ್ನ ಪತಿಗೆ ಹೇಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಅಷ್ಟೇ ಅಲ್ಲದೆ ನನ್ನ ಪತಿಯ ಮೊಬೈಲ್ ನಂಬರ್ ಪಡೆದು, ನಿನ್ನ ಬೆತ್ತಲೆ ಚಿತ್ರಗಳನ್ನು ಕಳುಹಿಸುತ್ತೇನೆ ಎಂದು ಹೇಳಿ ವಿಲಾಸ್ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದಾಗಿ ಅವನು ಕರೆದ ಅನೇಕ ಹೋಟೆಲ್‍ಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿತು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ವಿಲಾಸ್‍ನಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೇ ಸಂತ್ರಸ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಆಕೆಯ ಸ್ನೇಹಿತರು ಧೈರ್ಯ ಹೇಳಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣವೇ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ವಿಲಾಸ್‍ನನ್ನು ಬಂಧಿಸಿ, ಸಂತ್ರಸ್ತ ಮಹಿಳೆಯ ನಗ್ನ ಫೋಟೋಗಳಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *