ಒಂದೇ ಕ್ವಾಟರ್ ಕುಡಿರೀಪ್ಪಾ- ಕುಡುಕರಲ್ಲಿ ಶಾಸಕ ಶಿವಲಿಂಗೇಗೌಡ ಮನವಿ

Public TV
2 Min Read

-ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದ್ದು ಮಾಡಿದ ಎಣ್ಣೆ ಮ್ಯಾಟರ್

ಹಾಸನ: ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದು ಎಣ್ಣೆ ವಿಚಾರವಾಗಿಯೇ ಹೆಚ್ಚು ಸಮಯ ಚರ್ಚೆಯಾಯಿತು. ಶಾಸಕರು ಸೇರಿದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಮದ್ಯದ ಕುರಿತು ಮಾತನಾಡಿ, ಸಭೆಯನ್ನು ನಗೆಯಲ್ಲಿ ತೇಲಾಡಿಸಿದ್ರು.

ಮೊದಲಿಗೆ ಮದ್ಯದ ವಿಚಾರ ಪ್ರಸ್ತಾಪಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು, ಗ್ರಾಮಗಳಲ್ಲಿ ರೈತರಿಗೆ ಎಣ್ಣೆ ಸಾಲ ಸಿಗುತ್ತಿದೆ. ಒಂದು ಕ್ವಾಟರ್ ಕುಡಿಯುವವನು, ಸಾಲ ಸಿಗುತ್ತೆ ಅಂತಾ ಆರು-ಏಳು ಕ್ವಾಟರ್ ಕುಡಿತ್ತಿದ್ದಾನೆ. ದಯವಿಟ್ಟು ಒಂದು ಕ್ವಾಟರ್ ಮಾತ್ರ ಕುಡಿಯುವ ರೀತಿ ಮಾಡ್ರಪ್ಪ ಎಂದು ಹೇಳಿದರು. ಅವರ ಮಾತಿನ ಧಾಟಿ ಸಭೆಯಲ್ಲಿ ನಗುವಿಗೆ ಕಾರಣವಾಯಿತು.

ಮನೆಯಲ್ಲಿ ಪತ್ನಿ, ಮಕ್ಕಳ ಬಗ್ಗೆ ಚಿಂತೆ ಮಾಡುವುದಿಲ್ಲ. ಎಮ್ಮೆ ಮಾರಿಕೊಳ್ಳುವ ಪರಿಸ್ಥಿತಿ ಬರುತ್ತಿದೆ ಎಂದು ಶಾಸಕರು ಮಾತು ಮುಗಿಸಿದರು. ಇದಕ್ಕೆ ದನಿಗೂಡಿಸಿದ ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ ಮದ್ಯದ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಮತ್ತಿನ ಅಮಲಿನಲ್ಲಿ ಕೆಲವರು ಅದನ್ನೇ ಕುಡಿಯುತ್ತಾರೆ. ಅಧಿಕಾರಿಗಳು ಚೆನ್ನಾಗಿ ಡ್ರೆಸ್ ಹಾಕಿಕೊಂಡು ಬರುತ್ತಾರೆ. ಕೆಲಸ ಮಾತ್ರ ಮಾಡುವುದಿಲ್ಲ ಎಂದು ಅಸಮಧಾನ ಹೊರಹಾಕಿದರು.

 

ಇದೇ ವಿಚಾರಕ್ಕೆ ದನಿಗೂಡಿಸಿದ ಹಾಸನ ಶಾಸಕ ಪ್ರೀತಮ್ ಗೌಡ ಅವರು, ನಗರದ ಭಾಗಗಳಲ್ಲಿ ಬೆಳಗ್ಗೆಯೇ ಮದ್ಯದಂಗಡಿ ಓಪನ್ ಆಗುತ್ತಿವೆ. ದಯವಿಟ್ಟು 11 ಗಂಟೆಯ ನಂತರ ಎಣ್ಣೆ ಮಾರಾಟ ಮಾಡಬೇಕು ಅಂತಾ ಸಮಯ ನಿಗಧಿಪಡಿಸಿ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

ಶಾಸಕರ ಮಾತನ್ನು ಆಲಿಸಿದ ಸಚಿವ ಎಚ್.ಡಿ.ರೇವಣ್ಣ ಅವರು ಕೂಡ, ಕುಡುಕರ ಸಮಸ್ಯೆಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕುಡಿದು ಮನೆಗೆ ಬಂದು ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ. ಈ ರೀತಿ ಕುಡಿದು ಓಡಾಡುವರ ಮೇಲೆ ಒಂದರೆಡು ಕೇಸ್ ಹಾಕಿ ಬುದ್ಧಿ ಕಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಕುಡಿದು ಬೈಕ್ ಓಡಿಸುತ್ತಾರೆ. ಒಂದು ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡರೆ ಪರಿಹಾರದ ಹಣ ಕೂಡ ಸಿಗಲ್ಲ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *