ಉತ್ಸವಕ್ಕೂ ಮುನ್ನ ಹಾಸನಾಂಬೆ ದೇವಿಯ ಪವಾಡದ ಬಗ್ಗೆಯೇ ಅನುಮಾನ!

Public TV
2 Min Read

– ಜ್ಞಾನ ವಿಜ್ಞಾನ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಎಚ್ಚರಿಕೆ

ಹಾಸನ: ಮುಂದಿನ ತಿಂಗಳಿಂದ ವಿಖ್ಯಾತ ದೇವಾಲಯ ಹಾಸನಾಂಬೆಯ ಉತ್ಸವ ನಡೆಯಲಿದ್ದು, ಇದೀಗ ಹಾಸನಾಂಬೆಯ ಪವಾಡ, ಮಹಿಮೆಯ ಬಗ್ಗೆ ಅನುಮಾನವೊಂದು ಎದ್ದಿದೆ.

ಈ ದೇವಾಲಯದ ಬಾಗಿಲನ್ನು ವರ್ಷಕೊಮ್ಮೆ ಮಾತ್ರ ತೆಗೆಯುತ್ತಾರೆ. ಮತ್ತೆ ಬೆರಳೆಣಿಕೆ ದಿನಗಳ ನಂತರ ಮತ್ತೆ ಮುಚ್ಚಲಾಗುತ್ತದೆ. ಕಳೆದ ವರ್ಷ ಹಚ್ಚಿದ ದೀಪ ಉರಿಯುತ್ತಲೆ ಇರುತ್ತದೆ. ಇಟ್ಟ ಅನ್ನದ ನೈವೇದ್ಯ ಹಳಸುವುದಿಲ್ಲ. ಹೂವು ಬಾಡುವುದಿಲ್ಲ. ಇದೆಲ್ಲ ಆ ದೇವಿಯ ಮಹಿಮೆ ಮತ್ತು ಪವಾಡ ಎನ್ನುತ್ತಾರೆ.

ನಿಜಕ್ಕೂ ಅಲ್ಲಿ ಒಂದು ವರ್ಷಗಳ ಕಾಲ ದೀಪ ಉರಿಯುತ್ತಲೇ ಇರುತ್ತಾ ಎನ್ನುವ ಒಂದು ಪ್ರಶ್ನೆ ಸದಾ ಎಲ್ಲರಿಗೂ ಕಾಡುತ್ತದೆ. ಆ ಹೂವುಗಳ ಬಾಡುವುದೇ ಇಲ್ವ. ನೈವೇದ್ಯ ನಿಜಕ್ಕೂ ಹಳಸುವುದಿಲ್ಲವೇ ಎನ್ನುವ ಹಲವು ಪ್ರಶ್ನೆಗಳು ಸಹಜವಾಗಿ ಎಲ್ಲರಲ್ಲೂ ಇದೆ. ಆದ್ರೆ ಈಗಾಗಲೇ ಕೋಟ್ಯಂತರ ಮಂದಿ ಭಕ್ತಿಯಿಂದ ದೇವಿಯ ದರ್ಶನವನ್ನೂ ಮಾಡಿದ್ದಾರೆ. ಶ್ರದ್ಧಾಭಕ್ತಿಯಿಂದ ಹಾಸನಾಂಬೆಯ ದರ್ಶನವನ್ನೂ ಮಾಡುತ್ತಾರೆ. ಆದ್ರೆ ಇಲ್ಲಿ ನಡೆಯುವ ಪವಾಡದ ಸತ್ಯಾಸತ್ಯತೆ ಏನು ಎಂಬ ಪ್ರಶ್ನೆಗೆ ಇದೀಗ ಮತ್ತೆ ಜೀವ ಬಂದಿದೆ.

ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಹಾಸನಾಂಬೆ ಉತ್ಸವಕ್ಕೂ ಮುನ್ನ ಅಲ್ಲಿಯ ಪವಾಡ ಕುರಿತು ಸತ್ಯಾಸತ್ಯತೆ ಶೋಧ ನಡೆಯಬೇಕು ಎಂದು ಒತ್ತಾಯ ಕೇಳಿಬಂದಿದೆ. ಇದಕ್ಕಾಗಿ ಮೂಢನಂಬಿಕೆ ವಿರೋಧಿಸುವ ಮತ್ತು ವಿವಿಧ ಸಂಘಸಂಸ್ಥೆಗಳ ಸದಸ್ಯರು ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಮಾಡಲು ಮುಂದಾಗಿದ್ದಾರೆ. ಒಂದೆಡೆ ಮೂಢನಂಬಿಕೆ ನಿಷೇಧ ಕಾನೂನು ಜಾರಿಗೆ ತಂದಿರುವ ಸರ್ಕಾರವೇ ಇಲ್ಲಿ ಮೂಢನಂಬಿಕೆಯನ್ನ ಬಿತ್ತರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಜ್ಞಾನ-ವಿಜ್ಞಾನ ಸಮಿತಿ ಸದಸ್ಯರು ಜಿಲ್ಲಾಡಳಿತ ನಿಜಾಂಶವನ್ನು ಬಯಲು ಮಾಡಬೇಕು ಎಂದು ಆಗ್ರಹಿಸುವ ಕುರಿತು ಚರ್ಚೆ ನಡೆಸಿದ್ದಾರೆ.

ಹಾಸನ ನಗರದ ಕಚೇರಿಯಲ್ಲೇ ನಡೆದ ಈ ಸಭೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಂತರ ಸತ್ಯ ಶೋಧನ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ನೀಡಲು ನಿರ್ಧರಿಸಲಾಯಿತು. ಅಲ್ಲದೇ ಮುಂದಿನ ದಿನಗಳಲ್ಲಿ ಮೂಢ ನಂಬಿಕೆ ನಿಷೇಧ ಕಾನೂನಿನ ಅನ್ವಯ ಇದರ ವಿರುದ್ಧ ಹೋರಾಡಲು ತೀರ್ಮಾನಿಸಿದೆ. ಈ ಮೂಲಕ ಪ್ರಶ್ನೆಯನ್ನು ಹುಟ್ಟುಹಾಕಿರುವ ಸಮಿತಿ ಈ ಬಾರಿ ಹಾಸನಾಂಬೆ ಉತ್ಸವಕ್ಕೆ ಮುನ್ನವೇ ವಿವಾದಕ್ಕೆ ನಾಂದಿ ಹಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *