ಆದಿಪುರಾಣ-ಲವ್ವು ಕಿಸ್ಸು ಕಾಮ, ಭಾವನೆಗಳ ಹೋಮ!

Public TV
1 Min Read

ಬೆಂಗಳೂರು: ಕಿಸ್ಸಿಂಗ್ ಸೀನೊಂದರ ಮೂಲಕ ಅಪಾದಮಸ್ತಕ ಬಿಸಿಯೇರಿಸಿದ್ದ ಆದಿಪುರಾಣದ ಪಾರಾಯಣ ಶುರುವಾಗಿದೆ. ಯುವ ಮನಸಿನ ತವಕ ತಲ್ಲಣಗಳನ್ನೇ ಜೀವಾಳವಾಗಿಸಿಕೊಂಡು, ಅದನ್ನೇ ಮನರಂಜನೆಯ ಮೂಲವಾಗಿಸಿಕೊಂಡು ತಯಾರಾಗಿರೋ ಈ ಚಿತ್ರ ಈ ಹಿಂದೆಯೇ ಏರಿಕೊಂಡಿದ್ದ ‘ಚುಂಬಕ ಕುತೂಹಲ’ವನ್ನು ತಣಿಸುವಲ್ಲಿ ಯಶ ಕಂಡಿದೆ!

ಕಾಲೇಜು ಬೇಸಿನ ಕಥೆ ಹೊಂದಿದ ಸಿನಿಮಾ ಎಂದ ಮೇಲೆ ಅಲ್ಲಿ ಹಂಡ್ರೆಡ್ ಪರ್ಸೆಂಟ್ ಮನೋರಂಜನೆ ಖಚಿತ. ಅದನ್ನೇ ಉದ್ದೇಶವಾಗಿಸಿಕೊಂಡು ಆದಿ ಎಂಬ ಹುಡುಗನ ಸುತ್ತ ಹರಡಿಕೊಂಡ ಕಥಾನಕವನ್ನು ಆದಿಪುರಾಣ ಚಿತ್ರ ಒಳಗೊಂಡಿದೆ. ಕಾಲೇಜು ಜೀವನದಲ್ಲಿ ನಡೆಸಬಹುದಾದ ಅಷ್ಟೂ ಕಿತಾಪತಿಗಳನ್ನು ರಸವತ್ತಾಗಿಯೇ ದಾಖಲಿಸಿರೋ ಈ ಚಿತ್ರ ಆದಿ ಎಂಬ ಕಥಾ ನಾಯಕನ ಬದುಕಿನ ಘಟ್ಟಗಳ ಜೊತೆಯೇ ಯುವ ಜೀವನದ, ಪಡ್ಡೆ ಮನಸ್ಥಿತಿಯ ಹಲವಾರು ಆಯಾಮಗಳನ್ನೂ ತೆರೆದಿಡುತ್ತದೆ.

ಆದಿ ಬೆಂಗಳೂರಿನಲ್ಲಿಯೇ ಓದಿ ಅದೇ ನಗರದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡ ಹುಡುಗ. ಆತನ ಜೊತೆಗೊಂದು ಪಡೆ. ಅದರ ಸದಸ್ಯರಿಗೆಲ್ಲ ಕುಡಿತವೂ ಸೇರಿದಂತೆ ನಾನಾ ಖಯಾಲಿ. ಆದರೆ ತನ್ನ ಸುತ್ತಾ ಮಿನಿ ಬಾರುಗಳಂಥವರೇ ಓಡಾಡಿಕೊಂಡಿದ್ದರೂ ಒಂದು ತೊಟ್ಟು ಎಣ್ಣೆಯನ್ನೂ ಒಳಗಿಳಿಸದ ನಿಗ್ರಹ ಆದಿಯದ್ದು. ಆದರೆ ಆತ ತನ್ನೊಳಗಿನ ವಯೋಸಹಜ ಕಾಮನೆಗಳನ್ನು ತಡೆದುಕೊಳ್ಳಲಾಗದೆ ಪೋಲಿ ಚಿತ್ರ ನೋಡುವಾಗ ಅಪ್ಪನ ಮುಂದೆಯೇ ರೆಡ್ ಹ್ಯಾಂಡಾಗಿ ಸಿಕ್ಕಿಬೀಳೋ ದೌರ್ಭಾಗ್ಯವೂ ಬರುತ್ತೆ. ಅದುವೇ ವಿವಾಹ ಭಾಗ್ಯವಾಗಿಯೂ ರೂಪಾಂತರಗೊಳ್ಳುತ್ತೆ.

ಆದರೆ ಕೆಟ್ಟದ್ದೂ ಕೂಡಾ ಒಳಿತಾಗಿಯೇ ಬದಲಾದರೂ ಆದಿಗೆ ಫಸ್ಟ್ ನೈಟ್ ಭಾಗ್ಯ ಮಾತ್ರ ಕೂಡಿ ಬರೋದಿಲ್ಲ. ಪದೇ ಪದೆ ಪೋಸ್ಟ್ ಪೋನ್ ಆಗಲಾರಂಭಿಸಿದ ಫಸ್ಟ್ ನೈಟಿಂದ ಕಂಗಾಲಾಗಿ ಕಾವೇರಿದ ಆದಿಗೆ ಟೀಮ್ ಲೀಡರ್ ಹುಡುಗಿ ಹತ್ತಿರಾಗುತ್ತಾಳೆ. ಇದೆಲ್ಲದರ ನಡುವೆ ಆದಿಯ ಅವಸ್ಥೆ ಏನಾಗುತ್ತೆ ಎಂಬುದು ಅಸಲೀ ಕುತೂಹಲ.

ಇಡೀ ಚಿತ್ರ ಆದಿಯ ಸುತ್ತ ಸುತ್ತಿದರೂ ಯುವ ಲೋಕಕ್ಕೆ ರೌಂಡು ಹೊಡೆದಂತೆ ಚಿತ್ರ ಮೂಡಿ ಬಂದಿರೋದರಿಂದ ಹೆಚ್ಚೇನೂ ಬೋರು ಹೊಡೆಸೋದಿಲ್ಲ. ಆದಿಯಾಗಿ ನಟಿಸಿರೋ ಶಶಾಂಕ್ ನಟನೆಯಲ್ಲಿ ಭರವಸೆ ಮೂಡಿಸಿದ್ದಾರೆ. ಒಟ್ಟಾರೆಯಾಗಿ ಆದಿಯ ಪುರಾಣವನ್ನು ಒಂದು ಬಾರಿ ನೋಡಲೇನೂ ಮೋಸವಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *